ಅಡುಗೆ ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಕಡಿಮೆಯಾಗಲಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ತೈಲ ಉತ್ಪಾದಿಸುವ ದೇಶಗಳಾದ ರಷ್ಯಾ, ಕತಾರ್, ಕುವೈತ್ ಗಳ ಮೇಲೆ ಉತ್ಪಾದನೆ ಹೆಚ್ಚಳ ಮಾಡುವಂತೆ ಭಾರತ ಒತ್ತಡ ಹೇರುತ್ತಿದೆ. ಹಾಗಾಗಿ, ಬ್ಯಾರೆಲ್ ಗೆ ವೆಚ್ಚ ಕಡಿಮೆಯಾಗಲಿದ್ದು, ಇದರಿಂದ ಚಿಲ್ಲರೆ ಇಂಧನ ಬೆಲೆ ಕೂಡ ಕುಸಿಯಲಿದೆ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಬೇಡಿಕೆಯಲ್ಲಿ ಕುಸಿತವಾದ ಕಾರಣ ಕಳೆದ ವರ್ಷ ಏಪ್ರಿಲ್ ನಲ್ಲಿ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದವು ಎಂದು ಹೇಳಲಾಗಿದೆ.
ಈ ದೇಶಗಳು ಹೆಚ್ಚಿನ ಲಾಭ ಪಡೆಯಲು ಕಡಿಮೆ ಇಂಧನ ಉತ್ಪಾದಿಸುತ್ತಿವೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಲು ಕಾರಣವಾಗಿದೆ ಎಂದು ಅವರು ವಾರಣಾಸಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದು, ಬೆಲೆ ಇಳಿಕೆ ಸಲುವಾಗಿ ಉತ್ಪಾದನೆ ಹೆಚ್ಚಳಕ್ಕೆ ಒತ್ತಡ ಹೇರಲಾಗಿದೆ. ಡೀಸೆಲ್-ಪೆಟ್ರೋಲ್ ಮತ್ತು ಅನಿಲ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಬೆಲೆ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.