ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಸೆಪ್ಟೆಂಬರ್ ನಲ್ಲಿ ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿದೆ. ಅಗತ್ಯ ವಸ್ತುಗಳ ಬೆಲೆಗಳು, ವಿಶೇಷವಾಗಿ ಖಾದ್ಯ ತೈಲಗಳ ಬೆಲೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರ ಕೈಗೊಂಡ ಪೂರ್ವಭಾವಿ ಮತ್ತು ಮುಂಜಾಗ್ರತಾ ಕ್ರಮಗಳೇ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.
ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಗಳು ಇಳಿಕೆ ಕಾಣುತ್ತಿವೆ. ಸರ್ಕಾರದ ನಿರಂತರ ಮೇಲ್ವಿಚಾರಣೆ ಮತ್ತು ಖಾದ್ಯ ತೈಲ ಉದ್ಯಮದೊಂದಿಗಿನ ಚರ್ಚೆ, ಸಮಾಲೋಚನೆ ಕ್ರಮಗಳು ಖಾದ್ಯ ತೈಲದ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇಳಿಕೆಯ ಲಾಭವನ್ನು ಗ್ರಾಹಕರಿಗೆ ರವಾನಿಸುವುದನ್ನು ಖಚಿತಪಡಿಸಿದೆ ಎಂದು ಸಚಿವಾಲಯ ಹೇಳಿದೆ.
ಕಳೆದ ಎರಡು ತಿಂಗಳುಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್ ಗೆ 400 ರಿಂದ 500 ಯುಎಸ್ ಡಾಲರ್ ಗಳಷ್ಟು ಕುಸಿದಿವೆ. ಇದು ಚಿಲ್ಲರೆ ಮಾರುಕಟ್ಟೆಗಳಲ್ಲಿ ಪರಿಣಾಮ ಬೀರಲಾರಂಭಿಸುತ್ತಿದೆ ಎಂದು ಉದ್ಯಮವು ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಚಿಲ್ಲರೆ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.