ಬೆಂಗಳೂರು: ಕೊರೋನಾ ಸಂಕಷ್ಟದ ಹೊತ್ತಲ್ಲೇ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ.
ಪೆಟ್ರೋಲ್ ದರ 100 ರೂಪಾಯಿ ಸನಿಹಕ್ಕೆ ಬಂದಿದ್ದರೆ, ಅಡುಗೆ ಎಣ್ಣೆ 200 ರೂ. ಗಡಿಯತ್ತ ದಾಪುಗಾಲಿಟ್ಟಿದೆ. ಇನ್ನು ಬೇಳೆ ಬೆಲೆಯೂ ದುಬಾರಿಯಾಗಿದೆ. ಕೊರೋನಾ ಕಾರಣದಿಂದ ಕುಟುಂಬಗಳ ಆದಾಯದಲ್ಲಿ ಭಾರಿ ಕುಸಿತವಾಗಿದೆ. ಆದರೆ, ಇದೇ ವೇಳೆ ಅಗತ್ಯ ವಸ್ತುಗಳ ಬೆಲೆಏರಿಕೆ ಮಾತ್ರ ಏರುಗತಿಯಲ್ಲೇ ಸಾಗುತ್ತಿದೆ.
ಉತ್ಪಾದನೆ ವೆಚ್ಚ ಕಡಿಮೆಯಾಗಿದ್ದರೂ ಇಂಧನ ದರ ಹೆಚ್ಚಳದಿಂದಾಗಿ ಸಾಗಣೆ ಮೊದಲಾದ ವೆಚ್ಚ ಜಾಸ್ತಿಯಾಗಿದೆ. ಇದರ ಪರಿಣಾಮ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ.
ಎಲ್ಪಿಜಿ ಸಿಲಿಂಡರ್ ದರವನ್ನು ಒಂದು ವರ್ಷದಲ್ಲಿ 215 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ 812 ರೂಪಾಯಿ ಇದೆ. ವಾಣಿಜ್ಯ ಬಳಕೆ ಸಿಲಿಂಡರ್ ದರ 1701 ರೂ. ಇದೆ. ಗೃಹ ಬಳಕೆ ಸಿಲಿಂಡರ್ ದರ 4 ಬಾರಿ ಹೆಚ್ಚಳವಾಗಿದೆ.
ಇನ್ನು ಅಡುಗೆ ಎಣ್ಣೆ ದರ 80 ರೂಪಾಯಿಂದ 180 ರೂಪಾಯಿ ವರೆಗೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಸಿತ, ಆಮದು ಸುಂಕ ಏರಿಕೆಯಿಂದ ಅಡುಗೆ ಎಣ್ಣೆ ದರ ಏರುಗತಿಯಲ್ಲೇ ಇದೆ. ಪೆಟ್ರೋಲ್ ದರ 100 ರೂಪಾಯಿ ಸನಿಹಕ್ಕೆ ಬಂದಿದೆ. ಕೆಲವು ಕಡೆ ಈಗಾಗಲೇ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ತೊಗರಿಬೇಳೆ ಕಳೆದ ವರ್ಷ ಕೆಜಿಗೆ 90 ರೂ. ಇದ್ದು, ಈ ವರ್ಷ 160 ರೂಪಾಯಿಗೆ ಜಿಗಿದಿದೆ. ಇನ್ನು 5 ತಿಂಗಳ ಹಿಂದೆ 320 ರೂಪಾಯಿ ಇದ್ದ ಸಿಮೆಂಟ್ ದರ 430 ರೂಪಾಯಿ ಆಗಿದೆ. 1 ಟನ್ ಸ್ಟೀಲ್ ದರ 43 ಸಾವಿರ ರೂ.ನಿಂದ 57 ಸಾವಿರ ರೂ.ಗೆ ಜಿಗಿದಿದೆ. ಇದೇ ರೀತಿ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದ್ದು, ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.