ಬೆಂಗಳೂರು: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(ನಾಫೆಡ್) ಈರುಳ್ಳಿ, ತೊಗರಿ ಬೇಳೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದು, ಇದೀಗ ಕಡಿಮೆ ಬೆಲೆಗೆ ಗೋಧಿ ಹಿಟ್ಟು ಮಾರಾಟ ಆರಂಭಿಸಲಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಅನುಸಾರ ಒಂದು ಕೆಜಿ ಗೋಧಿ ದರ 36 -.50 ರೂ. ವರೆಗೂ ಇದೆ. ನಾಫೆಡ್ 27.5 ರುಪಾಯಿ ದರದಲ್ಲಿ ಗೋಧಿ ಮಾರಾಟ ಮಾಡುತ್ತಿದೆ. ಮೊಬೈಲ್ ವೆಹಿಕಲ್ ಗಳ ಮೂಲಕ ಗೋಧಿ ಹಿಟ್ಟು ಮಾರಾಟ ಮಾಡುತ್ತಿದ್ದು, ಒಬ್ಬರಿಗೆ ಒಂದು ಕೆಜಿಯ ಎರಡು ಪ್ಯಾಕೆಟ್ ನೀಡಲಾಗುತ್ತದೆ.
ಗುರುವಾರದಿಂದ ಗೋಧಿಯನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮೊದಲು ದಿನ 500 ಕೆಜಿ ಗೋಧಿ ಬಂದಿದ್ದು, ನಗರ ವ್ಯಾಪ್ತಿಯಲ್ಲಿ ನಾಫೆಡ್ ಮೊಬೈಲ್ ವಾಹನಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಭಾರತೀಯ ಆಹಾರ ನಿಗಮ ಗೋಧಿ ಪೂರೈಸುತ್ತಿದ್ದು, ನಾಫೆಡ್ ಗಿರಣಿಗಳಲ್ಲಿ ಹಿಟ್ಟು ಮಾಡಿಸಿ ಮಾರಾಟ ಮಾಡಲಾಗುತ್ತಿದೆ. ಬೆಲೆ ಇಳಿಕೆಯಾಗುವವರೆಗೆ ಅಥವಾ ಕೇಂದ್ರ ಸರ್ಕಾರ ಸೂಚನೆ ನೀಡುವವರೆಗೆ ಗೋಧಿ ಮಾರಾಟ ಮಾಡುವುದಾಗಿ ಹೇಳಲಾಗಿದೆ.