ನವದೆಹಲಿ: ಇಂಧನ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಬೆಲೆ ಈಗಾಗಲೇ ಏರಿಕೆ ಕಂಡಿದ್ದು, ಇದರಿಂದ ಚೇತರಿಸಿಕೊಳ್ಳುವ ಮೊದಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಕಾದಿದೆ.
ಏಪ್ರಿಲ್ 1 ರಿಂದ ಎಸಿ, ಫ್ಯಾನ್, ಟಿವಿ, ಸ್ಮಾರ್ಟ್ಫೋನ್ ಬೆಲೆಗಳು ಏರಿಕೆಯಾಗಲಿವೆ. ವಿಮಾನದಲ್ಲಿ ಪ್ರಯಾಣಿಸುವವರ ಜೇಬು ಬಿಸಿಯಾಗಲಿದೆ. ದೇಶೀಯ ವಿಮಾನ ದರಗಳ ಲೋವರ್ ಮಿತಿಯನ್ನು ಶೇಕಡ 5 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 1 ರಿಂದ ಏವಿಯೇಷನ್ ಸೆಕ್ಯುರಿಟಿ ಶುಲ್ಕ ಕೂಡ ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ದೇಶೀಯ ವಿಮಾನಗಳ ಭದ್ರತಾ ಶುಲ್ಕ 200 ರೂಪಾಯಿಯಾಗಲಿದೆ. ಪ್ರಸ್ತುತ ಇದು 160 ರೂಪಾಯಿ ಇದೆ.
ಏಪ್ರಿಲ್ 1 ರಿಂದ ಟಿವಿ ದುಬಾರಿಯಾಗಲಿದೆ. 2000 ದಿಂದ 3000 ರೂಪಾಯಿ ಹೆಚ್ಚಾಗಲಿದೆ. ಕಳೆದ 8 ತಿಂಗಳಲ್ಲಿ ಬೆಲೆಗಳು 3 ರಿಂದ 4 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಆದ್ರೂ ಮತ್ತೆ ಟಿವಿ ಬೆಲೆ ಏರಿಸಲು ತಯಾರಕರು ಮುಂದಾಗಿದ್ದಾರೆ. ಏಪ್ರಿಲ್ನಿಂದ ಎಸಿ ಕಂಪನಿಗಳು ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಕಂಪನಿಗಳು ಎಸಿ ಬೆಲೆಯನ್ನು ಹೆಚ್ಚಿಸಲು ತಯಾರಿ ನಡೆಸುತ್ತಿವೆ. ಎಸಿ ತಯಾರಿಸುವ ಕಂಪನಿಗಳು ಶೇಕಡಾ 4-6 ರಷ್ಟು ಬೆಲೆ ಹೆಚ್ಚಳಕ್ಕೆ ಮುಂದಾಗಿವೆ.
ಏಪ್ರಿಲ್ನಲ್ಲಿ ಕಾರು ಖರೀದಿ ಕೂಡ ದುಬಾರಿಯಾಗಲಿದೆ. ಅನೇಕ ಕಂಪನಿಗಳು ಕಾರ್ ಬೆಲೆ ಹೆಚ್ಚಳ ಮಾಡಲಿವೆ.ಟ್ರಾಕ್ಟರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಕೃಷಿ ಉಪಕರಣ ತಯಾರಕರಾದ ಎಸ್ಕೋರ್ಟ್ಸ್ ಲಿಮಿಟೆಡ್ನ, ಎಸ್ಕೋರ್ಟ್ಸ್ ಅಗ್ರಿ ಮೆಷಿನರಿ ವಿಭಾಗ ಹೇಳಿದೆ. ಉಕ್ಕು, ಆಟೋಮೊಬೈಲ್ ವಸ್ತುಗಳ ದರ ಹೆಚ್ಚಳವಾಗಲಿದೆ.