ಮುಂಬೈ: ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದುರ್ಬಲಗೊಂಡಿದೆ. ಇದರಿಂದಾಗಿ ಗ್ರಾಹಕ ಸರಕುಗಳ ಮಾರುಕಟ್ಟೆ ಮೇಲೆ ಒತ್ತಡ ಜಾಸ್ತಿಯಾಗಿರುವುದರಿಂದ ಅನೇಕ ಉತ್ಪನ್ನಗಳ ದರ ಏರಿಕೆಯಾಗಲಿದೆ.
ಲ್ಯಾಪ್ಟಾಪ್, ಸ್ಮಾರ್ಟ್ಫೋನ್, ಟಿವಿ, ರೆಫ್ರಿಜರೇಟರ್ ಸೇರಿದಂತೆ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಮಾತ್ರವಲ್ಲದೆ, ಸೋಪು, ಬಿಸ್ಕೆಟ್, ದರ ಕೂಡ ಏರಿಕೆಯಾಗಲಿದೆ.
ತಯಾರಿಕ ವೆಚ್ಚಗಳು ಏರಿಕೆಯಾದ ಹಿನ್ನೆಲೆಯಲ್ಲಿ ಜೂನ್ ನಲ್ಲಿ ದಿನಬಳಕೆ ಉತ್ಪನ್ನಗಳು ತುಟ್ಟಿಯಾಗಲಿದೆ. ಕಳೆದ ತಿಂಗಳು ಬಹುತೇಕ ಕಂಪನಿಗಳು ಉತ್ಪನ್ನಗಳನ್ನು ಶೇಕಡ 6 ರಷ್ಟು ಹೆಚ್ಚಳ ಮಾಡಿದ್ದು, ಈ ತಿಂಗಳು ಮತ್ತಷ್ಟು ದರ ಏರಿಕೆಯಾಗಲಿದೆ.
ಬಿಸ್ಕೆಟ್, ರಸ್ಕ್, ಬ್ರೆಡ್, ಕೇಕ್ ಉತ್ಪನ್ನಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ದರ ಏರಿಕೆಯಾಗಲಿದೆ. ಮಾರ್ಚ್ ನಲ್ಲಿ ಶೇಕಡ 8 ರಿಂದ 10 ರಷ್ಟು ದರ ಏರಿಕೆ ಮಾಡಿದ್ದ ಪಾರ್ಲೆ ಕಂಪನಿ ಮತ್ತು ಶೇಕಡ 5 ರಷ್ಟು ದರ ಏರಿಕೆ ಮಾಡಲು ಮುಂದಾಗಿದೆ.
ಟಿವಿಎಸ್ ಸ್ಕೂಟರ್, ಮೋಟಾರ್ ಸೈಕಲ್ ಗಳ ದರ 2,500 ರೂಪಾಯಿವರೆಗೆ ಏರಿಕೆಯಾಗಿದೆ. ಕಾರ್ ಉತ್ಪಾದಕ ಕಂಪನಿಗಳು ಮೇಲೆಯೂ ದರ ಏರಿಕೆಯ ಒತ್ತಡ ಸೃಷ್ಟಿಯಾಗಿದೆ. ಅದೇ ರೀತಿ ಅಲ್ಯುಮಿನಿಯಂ, ಉಕ್ಕು, ಪ್ಲಾಸ್ಟಿಕ್ ನಂತಹ ಸರಕುಗಳ ದರ ಶೇಕಡ 8 ರಿಂದ 10 ರಷ್ಟು ಏರಿಕೆ ಕಂಡಿದೆ.
ಡಾಲರ್ ಎದುರು ಭಾರತದ ಕರೆನ್ಸಿ 77 ರೂ.ಗೆ ಕುಸಿತವಾಗಿದ್ದು, ಆಮದು ಕಚ್ಚಾ ವಸ್ತುಗಳನ್ನು ಒಳಗೊಂಡ ಉತ್ಪನ್ನಗಳ ದರ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.