ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರ ನೆರವಾಗಲು ಮುಂದಾಗಿದ್ದು, ಧಾನ್ಯ ಖರೀದಿಗೆ ಒಪ್ಪಿಗೆ ನೀಡಲಾಗಿದೆ.
ಭತ್ತ, ರಾಗಿ, ಜೋಳ, ತೊಗರಿ, ಶೇಂಗಾ, ಹೆಸರು, ಉದ್ದು ಖರೀದಿ ಮಾಡಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತ ಕ್ವಿಂಟಾಲ್ ಗೆ 1868 ರೂ., ಎ ಗ್ರೇಡ್ ಭತ್ತ ಕ್ವಿಂಟಾಲ್ ಗೆ 1888 ರೂ., ರಾಗಿ ಕ್ವಿಂಟಾಲ್ ಗೆ 3295 ರೂ., ಬಿಳಿಜೋಳ ಹೈಬ್ರಿಡ್ ಕ್ವಿಂಟಾಲ್ ಗೆ 2620 ರೂಪಾಯಿ, ತೊಗರಿ ಕ್ವಿಂಟಾಲ್ ಗೆ 6000 ರೂ., ಶೇಂಗಾ ಕ್ವಿಂಟಾಲ್ ಗೆ 5275 ರೂ. ದರದಲ್ಲಿ ಖರೀದಿ ಮಾಡಲಾಗುವುದು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಗೋಪಾಲಯ್ಯ, ಜೆ.ಸಿ. ಮಧುಸ್ವಾಮಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮೊದಲಾದವರು ಭಾಗವಹಿಸಿದ್ದರು.
ಭತ್ತ ಖರೀದಿಗೆ ರೈತರ ನೋಂದಣಿ ಆರಂಭವಾಗಿದೆ. ರಾಗಿ. ಬಿಳಿ ಜೋಳ ಖರೀದಿ ಡಿಸೆಂಬರ್ 15 ರಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ.