ಗದಗ: ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೋಣ ತಾಲ್ಲೂಕಿನಲ್ಲಿ ಭಾರಿ ಮಳೆಯಾದ ಕಾರಣ ಮೆಕ್ಕೆಜೋಳ ಇಳುವರಿ ಕುಂಠಿತವಾಗಿದೆ. ಇದೇ ವೇಳೆ ಕೈಗೆ ಸಿಕ್ಕ ಅಲ್ಪಸ್ವಲ್ಪ ಮೆಕ್ಕೆಜೋಳಕ್ಕೆ ಬೆಲೆ ಕಡಿಮೆಯಾಗಿರುವುದು ರೈತರಿಗೆ ಶಾಕ್ ನೀಡಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ 2,600 ರೂಪಾಯಿ ದರ ಇತ್ತು. 2 ವಾರಗಳ ಹಿಂದೆ ದರ ಕುಸಿತವಾಗಿ 2000 ರೂಪಾಯಿಗೆ ಇಳಿದಿದ್ದು, ಕಳೆದ ವಾರ ಮತ್ತಷ್ಟು ಕಡಿಮೆಯಾಗಿ 1800 ರೂ.ಗೆ ಇಳಿದಿದೆ. ಬುಧವಾರದಿಂದ 1500 ರೂ.ಗೆ ಇಳಿದಿದೆ. ಹೀಗೆ ಮೆಕ್ಕೆಜೋಳದ ಬೆಲೆ ದಿನೇ ದಿನೇ ಕುಸಿಯುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.
ಸಾಲ ಮಾಡಿ ಬೀಜ, ಗೊಬ್ಬರ, ಬೇಸಾಯ ಕೂಲಿಗೆ ಖರ್ಚು ಮಾಡಿದ ಹಣ ಕೂಡ ಸಿಗದಂತಾಗಿದೆ. ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತು ಇಳುವರಿ ಕುಂಠಿತವಾಗಿದೆ. ಸಿಕ್ಕ ಅಲ್ಪಸ್ವಲ್ಪ ಬೆಳೆಗೆ ಬೆಲೆ ಇಲ್ಲದಂತಾಗಿ ರೈತರಿಗೆ ಆತಂಕ ಉಂಟುಮಾಡಿದೆ ಎನ್ನಲಾಗಿದೆ.