ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವಾರು ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ನೀಡಿದ್ದ ನಿಯಮ ಸಡಿಲಿಕೆ ಕೊನೆಗೊಳ್ಳಲಿದೆ. ಯೋಜನೆಗಳಿಗೆ ಸರ್ಕಾರ ಠೇವಣಿ, ವಿಸ್ತರಣೆ ಮತ್ತು ಖಾತೆ ತೆರೆಯುವ ನಿಯಮಗಳಿಗೆ ಸಡಿಲಿಕೆ ನೀಡಿತ್ತು.
ಈ ರಿಯಾಯಿತಿ ಜುಲೈ 31 ರಂದು ಮುಕ್ತಾಯಗೊಳ್ಳಲಿದೆ. ಪಿಪಿಎಫ್ ಖಾತೆದಾರರಿಗೆ 2019-20 ರ ಹಣಕಾಸು ವರ್ಷದಲ್ಲಿ ಜುಲೈ 31 ರವರೆಗೆ ತಮ್ಮ ಖಾತೆಗಳಲ್ಲಿ ಠೇವಣಿ ಇಡಲು ಸರ್ಕಾರ ಅನುಮತಿ ನೀಡಿದ್ದು, ಗರಿಷ್ಠ 1.5 ಲಕ್ಷ ರೂಪಾಯಿಯಾಗಿದೆ.
ತೆರಿಗೆ ಇಲಾಖೆ, ಸೆಕ್ಷನ್ 80 ಸಿ,80 ಡಿ ಸೇರಿದಂತೆ ಐಟಿ ಕಾಯ್ದೆಯಡಿ 2019-20ರ ಕಡಿತವನ್ನು ಪಡೆಯುವ ಗಡುವನ್ನು ವಿಸ್ತರಿಸಿತ್ತು. ಕೊರೊನೊ ವೈರಸ್ ಲಾಕ್ಡೌನ್ನಿಂದಾಗಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವ ಅರ್ಹತಾ ಮಾನದಂಡಗಳಲ್ಲೂ ಸರ್ಕಾರ ವಿನಾಯಿತಿ ನೀಡಿದೆ. ಮಾರ್ಚ್ 25 ರಿಂದ ಜೂನ್ 30 ರವರೆಗೆ ಲಾಕ್ ಡೌನ್ ಅವಧಿಯಲ್ಲಿ ಹೆಣ್ಣು ಮಗು 10 ವರ್ಷ ಪೂರೈಸಿದ್ದರೆ ಅವಳ ಹೆಸರಿನಲ್ಲಿ ಜುಲೈ 31 ರವರೆಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು ಎಂದು ಸರ್ಕಾರ ಹೇಳಿದೆ.
ಲಾಕ್ ಡೌನ್ ಕಾರಣ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಸಾಧ್ಯವಾಗದ ಹೆಣ್ಣುಮಕ್ಕಳ ಪೋಷಕರಿಗೆ ಈ ವಿನಾಯಿತಿ ಸಹಾಯ ಮಾಡುತ್ತದೆ. ಸುಕನ್ಯಾ ಸಮೃದ್ಧಿ ಖಾತೆಗಳನ್ನು ಹುಟ್ಟಿದ ದಿನಾಂಕದಿಂದ 10 ವರ್ಷ ವಯಸ್ಸಿನವರೆಗೆ ಮಾತ್ರ ತೆರೆಯಬಹುದು.