ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ಏಪ್ರಿಲ್ 1ರಿಂದ ಹಣ ಠೇವಣಿ ಹಾಗೂ ವಿತ್ ಡ್ರಾಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗ್ತಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಖಾತೆ ಹೊಂದಿರುವ ಗ್ರಾಹಕರಿಗೆ ಹಣವನ್ನು ಠೇವಣಿ ಇರಿಸಲು ಮತ್ತು ಹಿಂಪಡೆಯಲು ಹೆಚ್ಚುವರಿ ಶುಲ್ಕ ವಿಧಿಸಲಿದೆ. ಉಚಿತ ವಹಿವಾಟಿನ ಮಿತಿಯನ್ನು ಮೀರಿದಾಗ ಮಾತ್ರ ಹೆಚ್ಚುವರಿ ಪಾವತಿ ಮಾಡಬೇಕೆಂದು ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.
ಹೊಸ ನಿಯಮಗಳ ಪ್ರಕಾರ, ಮೂಲ ಉಳಿತಾಯ ಖಾತೆಯಲ್ಲಿ ತಿಂಗಳಿಗೆ 4 ಬಾರಿ ವಹಿವಾಟು ನಡೆಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದರ ನಂತರ ಹಣವನ್ನು ಹಿಂಪಡೆಯಲು ಶೇಕಡಾ 0.50 ಅಂದ್ರೆ 25 ರೂಪಾಯಿ ನೀಡಬೇಕಾಗುತ್ತದೆ. ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಹೊಂದಿದ್ದರೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಹಿಂಪಡೆಯಬಹುದು. ಅದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಹಣವನ್ನು ಹಿಂಪಡೆಯಲು 25 ರೂಪಾಯಿ ಶುಲ್ಕ ಪಾವತಿಸಬೇಕು.
ಗ್ರಾಹಕರು ಪ್ರತಿ ತಿಂಗಳು 10,000 ರೂಪಾಯಿವರೆಗೆ ಠೇವಣಿ ಇಡಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದಕ್ಕಿಂತ ಹೆಚ್ಚಿನ ಹಣ ಠೇವಣಿ ಇಡಲು ಕನಿಷ್ಠ 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಐಪಿಪಿಬಿ ಅಲ್ಲದ ಖಾತೆಯನ್ನು ಹೊಂದಿದ್ದರೆ 3 ಬಾರಿ ಉಚಿತ ವಹಿವಾಟು ಮಾಡಬಹುದು. ಈ ನಿಯಮಗಳು ಮಿನಿ ಸ್ಟೇಟ್ಮೆಂಟ್, ನಗದು ಹಿಂಪಡೆಯುವಿಕೆ ಮತ್ತು ನಗದು ಠೇವಣಿಗೆ ಬಳಸಬೇಕು. ಉಚಿತ ಮಿತಿ ಮುಗಿದ ನಂತರ ಪ್ರತಿ ವಹಿವಾಟಿನಲ್ಲೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಿತಿ ಮುಗಿದ ನಂತರ ಯಾವುದೇ ಠೇವಣಿಯ ಮೇಲೆ 20 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ನಿಧಿ ವರ್ಗಾವಣೆಗೆ 5 ರೂಪಾಯಿ ಪಾವತಿಸಬೇಕು. ಎಲ್ಲಾ ಖಾತೆದಾರರು ಐಪಿಪಿಬಿಯಲ್ಲಿ ಕನಿಷ್ಠ 5,00 ರೂಪಾಯಿ ಬ್ಯಾಲೆನ್ಸ್ ಇಡಬೇಕು. ಖಾತೆಯಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ 100 ರೂಪಾಯಿ ಶುಲ್ಕ ನೀಡಬೇಕು.