ಕೊಪ್ಪಳ: ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಟಾಟಾ-ಎಐಜಿ ಅಥವಾ ಸಮೂಹ ಅಪಘಾತ ಸುರಕ್ಷಾ ಪಾಲಿಸಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ.
ಪಾಲಿಸಿ ವಿವರ:
ಸಮೂಹ ಅಪಘಾತ ಸುರಕ್ಷಾ ಪಾಲಿಸಿಯ ವಿವರಗಳು ಇಂತಿವೆ. ಸಮೂಹ ಅಪಘಾತ ಸುರಕ್ಷಾ ಪಾಲಿಸಿ ಅಡಿಯಲ್ಲಿ ಪ್ರತಿಯೊಬ್ಬರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಅನಿರೀಕ್ಷಿತ ಅಪಘಾಗಳಿಂದಾಗುವ ದೈಹಿಕ ಹಾಗೂ ಹಣಕಾಸಿನ ತೊಂದರೆಗಳನ್ನು ಸರಳವಾಗಿ ನಿಭಾಯಿಸಬಹುದು.
ಕೇವಲ 399 ರೂ. ಹಾಗೂ 299 ರೂ.ಗಳ(ತೆರಿಗೆ ಬಳಿಕದ) ಕಂತಿನಲ್ಲಿ ಶಾಶ್ವತ ಸಂಪೂರ್ಣ ವೈಕಲ್ಯ, ಅಪಘಾತದಲ್ಲಿ ಸಾವು, ಅಪಘಾತದಿಂದ ಅಂಗಾಂಗ ಛೇದನಗಳಂತಹ ಅಪಘಾತಗಳಲ್ಲಿ, 10 ಲಕ್ಷ ರೂಪಾಯಿಗಳ ಕವರೇಜ್ ಪಡೆಯಬಹುದು. ಕೇವಲ 399 ರೂ. ಹಾಗೂ 299 ರೂ. ಗಳ ಕಂತಿನಲ್ಲಿ ಅಪಘಾತದ ವೈದ್ಯಕೀಯ ವೆಚ್ಚಗಳು ಹೊರರೋಗಿ ವಿಭಾಗದಲ್ಲಿ 30 ಸಾವಿರ ರೂಪಾಯಿಗಳ ಕವರೇಜ್, ಆಸ್ಪತ್ರೆಯಲ್ಲಿ ದಾಖಲಾದಾಗ ದೈನಂದಿನ 1 ಸಾವಿರ ರಂತೆ 10 ದಿನಗಳವರೆಗೆ, ಕುಟುಂಬದವರಿಗೆ ಸಾರಿಗೆ ಪ್ರಯೋಜನಗಳು(25 ಸಾವಿರದ ವರೆಗೆ), ಅಂತಿಮ ಸಂಸ್ಕಾರಕ್ಕೆ 5 ಸಾವಿರ ರೂಪಾಯಿಗಳನ್ನು ಪಡೆಯಬಹುದು.
ವಿಮೆ ಮೊತ್ತದ 10% ಅಥವಾ ನೈಜ ಮೊತ್ತ, ಇವುಗಳಲ್ಲಿ ಯಾವುದು ಕಡಿಮೆಯೊ ಆ ಮೊತ್ತದ ಶೈಕ್ಷಣಿಕ ಪ್ರಯೋಜನವನ್ನು ಗರಿಷ್ಠ 2 ಅರ್ಹ ಮಕ್ಕಳಿಗೆ ಪಡೆಯಬಹುದು. ಈ ವಿಮೆಯನ್ನು ತೆಗೆದುಕೊಳ್ಳಲು 18 ರಿಂದ 65 ವರ್ಷದ ವಯೋಮಿತಿಯವರಾಗಿರಬೇಕು, ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಛೇರಿಯನ್ನು ಭೇಟಿ ಮಾಡಬಹುದು ಎಂದು ಗದಗ ವಿಭಾಗ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.