ನವದೆಹಲಿ: ದೇಶಾದ್ಯಂತ 50 ಕೋಟಿ ಮಂದಿ ಪೋಸ್ಟ್ ಆಫೀಸ್ ನಲ್ಲೇ ಖಾತೆ ತೆರೆದಿದ್ದಾರೆ. ಇಷ್ಟು ದೊಡ್ಡ ನೆಟ್ ವರ್ಕ್ ಹೊಂದಿರುವ ಅಂಚೆ ಕಚೇರಿ ಈಗ ಜನಸ್ನೇಹಿಯಾಗಲು ಹೊರಟಿದೆ. ಇದರ ಉಳಿತಾಯ ಖಾತೆ ಮೂಲಕ ನೀವು ಮೊಬೈಲ್ ಆ್ಯಪ್ ಮೂಲಕ ವಹಿವಾಟು ನಡೆಸಬಹುದಾಗಿದೆ.
ಏಪ್ರಿಲ್ ನಿಂದ ಉಳಿದ ಬ್ಯಾಂಕ್ ಗಳ ಜತೆ ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಜೊತೆಗೆ ಪರಸ್ಪರ ಮಾಹಿತಿ ವಿನಿಮಯ ಹಾಗೂ ವಹಿವಾಟನ್ನು ನಡೆಸಲಾಗುತ್ತದೆ. ಈ ಮೂಲಕ 2021 ರಲ್ಲಿ ಡಿಜಿಟಲ್ ಸೇವೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಅಂಚೆ ಕಚೇರಿಯ ಉಳಿತಾಯ ಖಾತೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾಗುವುದು. ಅಂಚೆ ಇಲಾಖೆಯ ಮೊಬೈಲ್ ಆ್ಯಪ್ ಆದ ಡಾಕ್ ಪೇ (Dakpay) ಯನ್ನು ಖಾತೆದಾರರು ಡೌನ್ ಲೋಡ್ ಮಾಡಿಕೊಂಡಲ್ಲಿ ಅದರ ಮೂಲಕ ಡಿಜಿಟಲ್ ಪೇಮೆಂಟ್ ಅನ್ನು ಮಾಡಬಹುದಾಗಿದೆ.
ದೇಶಾದ್ಯಂತ ಇದುವರೆಗೆ 1.56 ಲಕ್ಷ ಅಂಚೆ ಕಚೇರಿಗಳು ಇವೆ. ಅಂಚೆ ಕಚೇರಿಯ ಉಳಿತಾಯ ಖಾತೆ ವಿಭಾಗದಲ್ಲಿ ಹಾಲಿ 10.81 ಕೋಟಿ ರೂಪಾಯಿ ಬ್ಯಾಲೆನ್ಸ್ ಇರುವುದಾಗಿ ಹೇಳಲಾಗಿದೆ. ಇದೀಗ ಈ ಬೆಳವಣಿಗೆ ಮತ್ತಷ್ಟು ಮಂದಿಯನ್ನು ಮುಟ್ಟುವಲ್ಲಿ ಸಹಕಾರಿಯಾಗಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ರೈಲು ಸೇವೆ, ಬಸ್ ಸೇವೆ ಸೇರಿದಂತೆ ಇತರ ಹಲವು ಸೇವೆಗಳು ಇಲ್ಲದಿದ್ದರೂ ಸಹ ಅಂಚೆ ಇಲಾಖೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಕಾರ್ಯ ನಿರ್ವಹಣೆ ಮಾಡಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿತ್ತು.