
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮನೆ ಬಾಗಿಲಿನ ಸೇವೆಯನ್ನು ಅಗತ್ಯವೆಂದು ಪರಿಗಣಿಸಿ ಸೇವಾ ಶುಲ್ಕವನ್ನು ಕಡಿಮೆ ಮಾಡಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿರ್ಧರಿಸಿದೆ.
ಪಿಎನ್‌ಬಿ ತನ್ನ ಲಕ್ಷಾಂತರ ಗ್ರಾಹಕರಿಗೆ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವನ್ನು ಕಡಿಮೆ ಮಾಡಿದೆ. ಬ್ಯಾಂಕ್ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಇನ್ಮುಂದೆ ಪಿಎನ್‌ಬಿ ಗ್ರಾಹಕರು ಡೋರ್‌ಸ್ಟೆಪ್ ಬ್ಯಾಂಕಿಂಗ್ ಮೂಲಕ ನಗದು ಪಡೆಯಲು ಕೇವಲ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಮೊದಲು ಇದರ ಬೆಲೆ 60-100 ರೂಪಾಯಿಯಿತ್ತು.
ಕೊರೊನಾ ಸಂದರ್ಭ ಹಾಗೂ ಲಾಕ್ಡೌನ್ ನಿಂದಾಗಿ ಬಹುತೇಕ ಎಲ್ಲಾ ಬ್ಯಾಂಕುಗಳು ಡೋರ್ ಸ್ಟೆಪ್ ಸೌಲಭ್ಯವನ್ನು ಒದಗಿಸುತ್ತಿವೆ. ಆದ್ರೆ ಎಲ್ಲ ಬ್ಯಾಂಕ್ ಗಳು ಇದಕ್ಕೆ ಶುಲ್ಕ ವಿಧಿಸುತ್ತವೆ. ಬ್ಯಾಂಕ್ ನ ಡೋರ್ ಸ್ಟೆಪ್ ಸೌಲಭ್ಯ ಬೇಕೆನ್ನುವ ಗ್ರಾಹಕರು ಹೆಸರು ನೋಂದಣಿ ಮಾಡಬೇಕು. ಬ್ಯಾಂಕ್ ಖಾತೆ ಜೊತೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಟೋಲ್ ಫ್ರೀ ಸಂಖ್ಯೆ 800-10-37-188 ಅಥವಾ 1800-12-13-721ಗೆ ಕರೆ ಮಾಡಬೇಕು. ಇಲ್ಲವೆ www.psbdsb.in ಮೂಲಕವೂ ಹೆಸರು ನೋಂದಾಯಿಸಬಹುದು.