ದಾವಣಗೆರೆ: ಕೇಂದ್ರ ಪುರಸ್ಕೃತ ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ’ಯ(ಪಿಎಂ ಸ್ವನಿಧಿ) ಯೋಜನೆಯಡಿ ಕಿರು ಸಾಲ ಮತ್ತು ಬಡ್ಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕೋವಿಡ್-19 ಲಾಕ್ಡೌನ್ ಅವಧಿಯು ಬೀದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದ್ದು, ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ದಿಗಾಗಿ ಹಾಗೂ ಅವರ ವ್ಯವಹಾರವನ್ನು ಪುನಾರಾರಂಭಿಸಲು ಬಂಡವಾಳ ಒದಗಿಸುವ ತುರ್ತು ಅವಶ್ಯಕತೆ ಇರುವುದರಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ವತಿಯಿಂದ ಬೀದಿ ವ್ಯಾಪಾರಸ್ಥರಿಗೆ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ.
ಈ ಯೋಜನೆಯ ನಿಯಮದಂತೆ ಅರ್ಹ ಬೀದಿ ವ್ಯಾಪಾರಸ್ಥರು 10,000 ರೂ. ಸಾಲ ಮತ್ತು ಬಡ್ಡಿ ಸಹಾಯ ಧನ ಪಡೆಯಬಹುದಾಗಿದ್ದು, ಆಸಕ್ತ ಬೀದಿ ವ್ಯಾಪಾರಸ್ಥರು ಈ ಯೋಜನೆಯ ವೆಬ್ ಪೋರ್ಟಲ್ http://pmsvanidhi.mohua.gov.in ಮೂಲಕ ಈಗಾಗಲೇ ಖಾತೆ ಹೊಂದಿರುವ ಬ್ಯಾಂಕ್ಗಳನ್ನು ಆಯ್ಕೆ ಮಾಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಬಹುದು.
ಬೀದಿಬದಿ ವ್ಯಾಪಾರಸ್ಥ ಕಾರ್ಡ್ ಹೊಂದದೇ ಇರುವವರು ಮಹಾನಗರಪಾಲಿಕೆಯಲ್ಲಿ ತೆರೆಯಲಾಗಿರುವ ಸಹಾಯ ಕೇಂದ್ರದ ಮೂಲಕ 24 ಗಂಟೆಯೊಳಗಾಗಿ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ ಕೇವಲ 10 ದಿನಗಳ ಒಳಗಾಗಿ ಸಾಲ ಮತ್ತು ಸಹಾಯಧನ ದೊರಕಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.