alex Certify ಅವೈಜ್ಞಾನಿಕ ನಿರ್ಧಾರದಿಂದ ಆರ್ಥಿಕ ಕುಸಿತ: ಈಗ ಕೊರೋನಾ ಲೆಕ್ಕದಲ್ಲಿ ಕೈತೊಳೆದುಕೊಂಡ ಮೋದಿಯಿಂದ ಅಪಾಯಕಾರಿ ಬೆಳವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವೈಜ್ಞಾನಿಕ ನಿರ್ಧಾರದಿಂದ ಆರ್ಥಿಕ ಕುಸಿತ: ಈಗ ಕೊರೋನಾ ಲೆಕ್ಕದಲ್ಲಿ ಕೈತೊಳೆದುಕೊಂಡ ಮೋದಿಯಿಂದ ಅಪಾಯಕಾರಿ ಬೆಳವಣಿಗೆ

ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ರದ್ದತಿ, ದೋಷಪೂರಿತ ಜಿಎಸ್ಟಿ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕಾರಣ. ಪ್ರಧಾನಿ ನರೇಂದ್ರ ಮೋದಿ ದೇಶದ ಮುಂದೆ ಮೊದಲು ತಪ್ಪು ಒಪ್ಪಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಲಾಕ್ಡೌನ್ ಅಗತ್ಯವಿತ್ತು ನಿಜ. ನಮ್ಮ ಪಕ್ಷ ಕೂಡಾ ಬೆಂಬಲ ನೀಡಿತ್ತು. ಆದರೆ, ಅವೈಜ್ಞಾನಿಕವಾಗಿ ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್ ಡೌನ್ ಮಾಡಿದ ಪರಿಣಾಮ ಲಾಭವಾಗಲಿಲ್ಲ. ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನಿಯವರು ವಹಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಕೊರೋನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದ್ದ ಪ್ರಧಾನಿ ಮೋದಿ ಜನರಿಗೆ ಜಾಗಟೆ ಬಾರಿಸಿ, ದೀಪ ಹಚ್ಚಲು ಹೇಳಿದ್ದು ಕೊರೋನಾ ಮಾರಿಯನ್ನು ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈಗ ರೋಧಿಸಿ ಫಲವೇನು ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ. ಆರ್ಬಿಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರವರೆಗೆ ಖ್ಯಾತ ಆರ್ಥಿಕ ತಜ್ಞರೆಲ್ಲರೂ ಆರ್ಥಿಕತೆ ಸಾಗುವ ದಾರಿಯ ಬಗ್ಗೆ ಆತಂಕ ಪಟ್ಟು ಎಚ್ಚರಿಕೆ ನೀಡಿದ್ದಾರೆ. ಈಗಲೂ ಸರ್ಕಾರ ಕುರುಡು ಮತ್ತು ಕಿವುಡಾಗಿದೆ ಎಂದು ದೂರಿದ್ದಾರೆ.

ದೇಶದ ಜಿಡಿಪಿ ಶೇಕಡ 23.9 ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ ನಿಜ. ಕುಸಿತದ ಹೊಣೆಯನ್ನು ಕೊರೋನಾದ ಮೇಲೆ ಹೇರುವ ಮೂಲಕ ಪ್ರಧಾನಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

2015 ರಲ್ಲಿ ಜಿಡಿಪಿ ಅಂದಾಜು ಮಾಡುವ ಮೂಲ ವರ್ಷವನ್ನು 2004 -05 ರಿಂದ 2011 -12 ಕ್ಕೆ ಬದಲಿಸಲಾಯಿತು. ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನೇ ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೋನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ಮೋದಿ ಹೊರಟಿದ್ದಾರೆ ಎಂದು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...