ನವದೆಹಲಿ: ಕುಸಿದ ಆರ್ಥಿಕತೆ ಚೇತರಿಕೆಗೆ ಪ್ರಧಾನಿ ಮೋದಿ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು ಶೀಘ್ರವೇ ಮತ್ತೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ವಾರ ದೀಪಾವಳಿ ಬೋನಸ್ ಕೈಸೇರಲಿದೆ. ಕೊರೋನಾ ಬಿಕ್ಕಟ್ಟಿನ ನಡುವೆಯೇ ಕೇಂದ್ರದಿಂದ ಬೋನಸ್ ಘೋಷಣೆ ಮಾಡಲಾಗಿದೆ. ಆರ್ಥಿಕ ಚೇತರಿಕೆ ಉದ್ದೇಶದಿಂದ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಲು ಮೋದಿ ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಂಡಿದ್ದು ದಸರಾ, ದೀಪಾವಳಿ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ನೀಡಬಹುದೆಂದು ಹೇಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ನೀಡಲಾಗುವುದು. ವಿಜಯದಶಮಿಗೆ ಮೊದಲು ನೇರ ಲಾಭ ವರ್ಗಾವಣೆಯ ಮೂಲಕ ಬೋನಸ್ ಕೊಡಲಾಗುತ್ತದೆ. ಒಂದೇ ಕಂತಿನಲ್ಲಿ ಬೋನಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಬೋನಸ್ ಘೋಷಣೆಯಿಂದ ಸರ್ಕಾರಕ್ಕೆ 3737 ಕೋಟಿ ರೂಪಾಯಿ ವೆಚ್ಚವಾಗಲಿದೆ.
30 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಖರೀದಿ ಹೆಚ್ಚಾಗಿ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ. ಕುಸಿತ ಕಂಡಿರುವ ಆರ್ಥಿಕತೆ, ಜೆಡಿಪಿ, ಕೈಗಾರಿಕಾ ಉತ್ಪಾದನೆ, ಉದ್ಯೋಗ ನಷ್ಟ ತಪ್ಪಿಸಿ ಚೇತರಿಕೆ ನೀಡಲು ಬೇಡಿಕೆ ಹೆಚ್ಚಾಗುವಂತೆ ಮಾಡುವ ಉದ್ದೇಶದಿಂದ ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ಹೇಳಲಾಗಿದೆ.