ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ 8ನೇ ಪೂರ್ಣ ಪ್ರಮಾಣದ ಆಯವ್ಯಯ ಮಂಡಿಸಲು ಸಜ್ಜಾಗಿದೆ. ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಬಜೆಟ್ ಮಂಡಿಸಲಿದ್ದು, ಚುನಾವಣಾ ವರ್ಷವಾಗಿರುವುದರಿಂದ ಕರ್ನಾಟಕ ಸೇರಿದಂತೆ 9 ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ.
ತೆರಿಗೆ ಕಡಿತ, ಉತ್ಪಾದನೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಆದಾಯ ತೆರಿಗೆ ಸ್ಲಾಬ್ ಪರಿಷ್ಕರಿಸುವ ಸಾಧ್ಯತೆ ಇದ್ದು, ಮಧ್ಯಮ ವರ್ಗದ ಜನರಿಗೆ ದೊಡ್ಡ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ.
ಬೆಲೆ ಏರಿಕೆ, ಉದ್ಯೋಗ ಕಡಿತ, ಆರ್ಥಿಕ ಹಿಂಜರಿತದಿಂದ ಜನ ತತ್ತರಿಸಿದ್ದು, ಆರ್ಥಿಕತೆಗೆ ಬೂಸ್ಟರ್ ನೀಡುವ ಬಜೆಟ್ ಮಂಡನೆಯಾಗಲಿದೆ ಎನ್ನುವ ನಿರೀಕ್ಷೆ ಜನರಲ್ಲಿದೆ. 2024ರ ಲೋಕಸಭೆ ಚುನಾವಣೆಗೂ ಮೊದಲು ಮಂಡನೆ ಆಗುತ್ತಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.
ಪ್ರಸ್ತುತ ಜಾಗತಿಕ ಸ್ಥಿತಿಯಲ್ಲಿ ಭಾರತ ಮಂಡಿಸುವ ಬಜೆಟ್ ಬಗ್ಗೆ ಇಡೀ ವಿಶ್ವ ಎದುರು ನೋಡುತ್ತಿದೆ. ಭಾರತದ ಬಜೆಟ್ ವಿಶ್ವಕ್ಕೆ ಭರವಸೆಯ ಆಶಾಕಿರಣವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.