ಮೇ 14 ರಂದು ಪ್ರಧಾನಿ ನರೇಂದ್ರ ಮೋದಿ ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯ ಎಂಟನೇ ಕಂತಿನ ಹಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿ 9.5 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳಿಗೆ ಪಿಎಂ ಮೋದಿ 20,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ.
ದೇಶಾದ್ಯಂತದ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಯೋಜನೆಯಡಿ, ವರ್ಷಕ್ಕೆ 6000 ರೂಪಾಯಿಗಳನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ತಲಾ 2000 ರೂಪಾಯಿಗಳಂತೆ ಫಲಾನುಭವಿಗಳ ಬ್ಯಾಂಕ್ ಗೆ ಹಣ ಹಾಕಲಾಗುತ್ತದೆ.
ಫೆಬ್ರವರಿ 2019ರಂದು ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆ ಸಂದರ್ಭದಲ್ಲಿ 2 ಹೆಕ್ಟೆರ್ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಈ ಯೋಜನೆ ಲಾಭ ಸಿಗ್ತಿತ್ತು. ಈ ಯೋಜನೆಯನ್ನು ಜೂನ್ 2019 ರಲ್ಲಿ ಪರಿಷ್ಕರಿಸಲಾಯಿತು. ಈಗ ಜಮೀನು ಲೆಕ್ಕಿಸದೆ ಎಲ್ಲ ರೈತ ಕುಟುಂಬಗಳಿಗೆ ಈ ಯೋಜನೆ ಲಾಭ ಸಿಗಲಿದೆ.
ಸಾಂಸ್ಥಿಕ ಭೂ ಮಾಲೀಕರು, ಸಾಂವಿಧಾನಿಕ ಹುದ್ದೆ ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು, ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು, ವೈದ್ಯರು, ಎಂಜಿನಿಯರ್‌ಗಳು, ವಕೀಲರು ಮತ್ತು ನಿವೃತ್ತ ಪಿಂಚಣಿದಾರರು, ಮಾಸಿಕ 10,000 ರೂಪಾಯಿಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು, ಹಿಂದಿನ ವರ್ಷ ಆದಾಯ ತೆರಿಗೆ ಪಾವತಿ ಮಾಡಿದವರು ಈ ಯೋಜನೆಯಿಂದ ಹೊರಗಿರಲಿದ್ದಾರೆ.