ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳು ನೀವಾಗಿದ್ದರೆ ನಿಮಗೊಂದು ಮುಖ್ಯ ಮಾಹಿತಿಯಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪ ಸರ್ಕಾರಕ್ಕೆ ಇಲ್ಲ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ರೈತ ಕುಟುಂಬಗಳಿಗೆ ಮೊದಲಿನಂತೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು ಎಂದವರು ಹೇಳಿದ್ದಾರೆ.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ರೈತರಿಗೆ ಪ್ರತಿವರ್ಷ 6000 ರೂಪಾಯಿಗಳ ಆರ್ಥಿಕ ನೆರವು ಸಿಗ್ತಿದೆ. ಈ ಯೋಜನೆಯ ಲಾಭ ಪಡೆಯಲು ಡಿಸೆಂಬರ್ 2019 ರಿಂದ ಆಧಾರ್ ಕಡ್ಡಾಯವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗುರುತಿಸಿದ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ಮೂರು ಕಂತುಗಳಲ್ಲಿ ಕಳುಹಿಸಲಾಗುವುದು.
ಮಹಾರಾಷ್ಟ್ರದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅನರ್ಹ ರೈತರಿಂದ ಹಣವನ್ನು ವಸೂಲಿ ಮಾಡುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಮಾರ್ಚ್ 11 ರಂದು ಕೇಂದ್ರ ಸರ್ಕಾರ ಸುಮಾರು 78.37 ಕೋಟಿ ರೂಪಾಯಿ ವಸೂಲಿ ಮಾಡಿದೆ ಎಂದಿದ್ದಾರೆ.