ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 8.55 ಕೋಟಿ ರೈತರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ. ಆರನೇ ಕಂತು ಪಾವತಿಗೆ 17,100 ಕೋಟಿ ರೂಪಾಯಿಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದ್ದಾರೆ.
2018 ರ ಡಿಸೆಂಬರ್ ನಲ್ಲಿ ಆರಂಭಿಸಲಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಮೂರು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ವಾರ್ಷಿಕ 6,000 ರೂ. ನೀಡಲಿದೆ.
ವರ್ಚುವಲ್ ಸಮಾರಂಭದಲ್ಲಿ ಪ್ರಧಾನಿ ಮೋದಿ 2000 ರೂ. ಗಳನ್ನು 8.55 ಕೋಟಿ ರೈತರ ಖಾತೆಗೆ ವರ್ಗಾಯಿಸಿದ್ದಾರೆ. ಪಿಎಂ ಕಿಸಾನ್ ಯೋಜನೆಯ ನೊಂದಾಯಿತ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ 2000 ರೂಪಾಯಿ ಜಮಾ ಆಗದಿದ್ದರೆ ದೂರು ನೋಂದಾಯಿಸಲು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಕೃಷಿ ಸಚಿವಾಲಯವು ರೈತರಿಗೆ ಸಹಾಯವಾಣಿ ಸಂಖ್ಯೆ ನೀಡಿದ್ದು, ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261 ಅಥವಾ ಟೋಲ್-ಫ್ರೀ ಸಂಖ್ಯೆ 1800115526 ಗೆ ಕರೆ ಮಾಡಬಹುದು. ಇದಲ್ಲದೆ, ಕೃಷಿ ಸಚಿವಾಲಯದ ಲ್ಯಾಂಡ್ಲೈನ್ ಸಂಖ್ಯೆ 011-23381092 ಗೆ ಕರೆ ಮಾಡಬಹುದು.
ಆನ್ ಲೈನ್ ನಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರೀಕ್ಷಿಸಬಹುದಾಗಿದೆ. ಮೊದಲಿಗೆ ಪಿಎಂ ಕಿಸಾನ್ ಪೋರ್ಟಲ್ – https://pmkisan.gov.in/ ಗೆ ಲಾಗ್ ಇನ್ ಮಾಡಿ. ಬಲಭಾಗದಲ್ಲಿ ನೀಡಿರುವ ‘ಫಾರ್ಮರ್ಸ್ ಕಾರ್ನರ್’ ಆಯ್ಕೆಗೆ ಹೋಗಿ. ‘ಫಲಾನುಭವಿಗಳ ಪಟ್ಟಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ಆಯ್ಕೆ ಮಾಡಿ. ಅಗತ್ಯವಿರುವ ಎಲ್ಲಾ ಆಯ್ಕೆಗಳನ್ನು ಆಯ್ಕೆ ಮಾಡಿದ ನಂತರ, ‘ವರದಿ ಪಡೆಯಿರಿ’ ಕ್ಲಿಕ್ ಮಾಡಿ. ಈಗ ನಿಮ್ಮ ಹಳ್ಳಿಯ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಕಾಣಬಹುದಾಗಿದೆ. ಈ ಪಟ್ಟಿಯು ವರ್ಣಮಾಲೆಯ ಕ್ರಮದಲ್ಲಿದ್ದು, ನಿಮ್ಮ ಹೆಸರನ್ನು ನೀವು ಸುಲಭವಾಗಿ ಕಾಣಬಹುದು.