ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ನೆರವಿನ ಧನದ ಏಳನೇ ಕಂತಿನ ಹಣವನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು.
ಮಾಧ್ಯಮಗಳಲ್ಲಿ ವರದಿಯಾದಂತೆ, ಡಿಸೆಂಬರ್ 23ರ ವೇಳೆಗೆ ಬಹಳಷ್ಟು ರೈತರಿಗೆ ನಿಧಿ ವರ್ಗಾವಣೆ ಆದೇಶ (ಎಫ್‌ಟಿಓ) ಜನರೇಟ್ ಆಗಿದ್ದರೆ, ಕೆಲವರಿಗೆ ಇನ್ನೂ ಆಗಿಲ್ಲ. ಹೀಗಾಗಿ ಕೆಲವಷ್ಟು ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ವಿಳಂಬವಾಗಬಹುದು.
ಪಿಎಂ-ಕಿಸಾನ್ ಯೋಜನೆಯಡಿ ಒಂಬತ್ತು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಗಳಷ್ಟು ನಿಧಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಗಾವಣೆ ಮಾಡಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬವಾದ ಡಿಸೆಂಬರ್ 25ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ನಿಧಿ ವರ್ಗಾವಣೆ ಮಾಡಲಾಗುವುದು.
ಮೇಲ್ಕಂಡ ಯೋಜನೆಯಡಿ, ದೇಶಾದ್ಯಂತ 14.5 ಕೋಟಿ ರೈತರಿಗೆ ನೆರವಿನ ರೂಪದಲ್ಲಿ ಕೇಂದ್ರ ಸರ್ಕಾರವು ತಲಾ ಆರು ಸಾವಿರ ರೂಗಳನ್ನು ವಾರ್ಷಿಕ ಮೂರು ಕಂತುಗಳಲ್ಲಿ, ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ.