ನವದೆಹಲಿ: ಇಯರ್ ಬಡ್ಸ್, ಐಸ್ ಕ್ರೀಂ, ಕ್ಯಾಂಡಿ ಮತ್ತು ಬಲೂನ್ ಗಳಲ್ಲಿ ಪ್ಲಾಸ್ಟಿಕ್ ಕಡ್ಡಿಗಳ ಬಳಕೆಗೆ ನಿಷೇಧ ಹೇರಲಾಗಿದೆ. 2022 ರ ಜನವರಿ 1 ರಿಂದ ನಿಷೇಧ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಅಶ್ವಿನಿ ಚೌಬೆ ಸಂಸತ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಒಂದು ಸಲ ಬಳಕೆಯಾಗುವ ಪ್ಲಾಸ್ಟಿಕ್ ವಸ್ತುಗಳ ತಯಾರಿ, ಆಮದು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲು ಉದ್ದೇಶಿಸಲಾಗಿದೆ. 2022ರ ಜನವರಿ 1 ರಿಂದ ನಿಷೇಧ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ತಯಾರಿಕೆ, ಮಾರಾಟ ಮತ್ತು ಕೆಲವು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ನಿಷೇಧಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗಿದ್ದು, ಜನವರಿ 1 ರಿಂದ ಪ್ಲಾಸ್ಟಿಕ್ ಕಡ್ಡಿ ಇರುವ ಇಯರ್ ಬಡ್ಸ್, ಬಲೂನ್ ಗಳ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್ ಕ್ರೀಂ ಕಡ್ಡಿ, ಅಲಂಕಾರಿಕ ಥರ್ಮಕೋಲ್ ನಿಷೇಧಿಸಲಾಗುವುದು.
ಜುಲೈನಿಂದ ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್, ಗ್ಲಾಸ್, ಚಮಚ, ಚಾಕು, ಸ್ಟ್ರಾ, 100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಮತ್ತು ಪಿವಿಸಿ ಬ್ಯಾನರ್ ಗಳನ್ನು ನಿಷೇಧಿಸಲಾಗುತ್ತದೆ.
ಸೆಪ್ಟೆಂಬರ್ 30 ರೊಳಗೆ ಪೆಟ್ರೋಕೆಮಿಕಲ್ ಬಳಸಿ ತಯಾರಿಸಲಾದ, 120 ಮೈಕ್ರಾನ್ ಗಿಂತ ಕಡಿಮೆ ತೂಕದ ಕ್ಯಾರಿಬ್ಯಾಗ್, 60 ಜಿಎಸ್ಎಂಗಿಂತ ಕಡಿಮೆ ದರ್ಜೆ ಕ್ಯಾರಿಬ್ಯಾಗ್(ಓವನ್ ಬಳಕೆ ಹೊರತಾದ) ನಿಷೇಧಿಸಲಾಗುವುದು.