ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾಗೂ ಮುನ್ನ ಸಾಕಷ್ಟು ಸೇವಿಂಗ್ ಮಾಡಿದ್ದವರು ಕೂಡ ಈಗ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. ಯಾವುದೇ ಆಪತ್ತು ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ಮೊದಲೇ ನಮ್ಮ ಆರ್ಥಿಕ ಭದ್ರತೆ ಬಗ್ಗೆ ಪ್ಲಾನ್ ಮಾಡಬೇಕಾಗುತ್ತದೆ.
ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ತಜ್ಞರು ಅನೇಕ ದಾರಿಗಳನ್ನು ಹೇಳಿದ್ದಾರೆ. ತಜ್ಞರ ಪ್ರಕಾರ, ಯಾವಾಗಲೂ ಸ್ವತಂತ್ರ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿರಬೇಕು. ಇದಕ್ಕೆ ತಜ್ಞರು ಎರಡು ಕಾರಣಗಳನ್ನು ಹೇಳ್ತಾರೆ. ಒಂದು ಯಾವಾಗ್ಲೂ ನಾವು ಮಾಡುವ ಕಂಪನಿಯನ್ನು ಸಂಪೂರ್ಣವಾಗಿ ಅವಲಂಬಿಸಿರಬಾರದು. ಎರಡನೇಯದು ನಿವೃತ್ತಿ ನಂತ್ರ ಕಂಪನಿ ಆರೋಗ್ಯ ವಿಮೆ ನಮಗೆ ಸಿಗುವುದಿಲ್ಲ. ನಿವೃತ್ತಿ ನಂತ್ರ ಹೊಸ ವಿಮೆ ಪಡೆಯಲು ಸಾಧ್ಯವಾಗುವುದಿಲ್ಲ.
ತೊಂದರೆ ಹೇಳಿಕೇಳಿ ಬರುವುದಿಲ್ಲ. ಹಾಗಾಗಿ ತುರ್ತು ನಿಧಿಯಯನ್ನು ಮಾಡಿಟ್ಟುಕೊಳ್ಳಬೇಕು. ಇಲ್ಲವಾದ್ರೆ ನಮ್ಮೆಲ್ಲ ಆಸ್ತಿಯನ್ನು ಚಿಕಿತ್ಸೆಗೆ ಖರ್ಚು ಮಾಡಿ ಖಾಲಿ ಕೈನಲ್ಲಿರಬೇಕಾಗುತ್ತದೆ. ಮೊದಲು ತುರ್ತು ನಿಧಿ ಬಗ್ಗೆ ತಿಳಿದುಕೊಳ್ಳಬೇಕು.
ಭವಿಷ್ಯದ ತುರ್ತುಸ್ಥಿತಿ ಮತ್ತು ಯೋಜಿತವಲ್ಲದ ಖರ್ಚುಗಳಿಗಾಗಿ ಒಬ್ಬ ವ್ಯಕ್ತಿಯು ಪ್ರತ್ಯೇಕವಾಗಿ ಠೇವಣಿ ಮಾಡಿದಾಗ ಅದನ್ನು ತುರ್ತು ನಿಧಿ ಎಂದು ಹೇಳಲಾಗುತ್ತದೆ. ತುರ್ತು ನಿಧಿಯನ್ನು ಎಲ್ಲಿ ಠೇವಣಿ ಮಾಡಬೇಕೆಂಬುದರ ಬಗ್ಗೆ ಯೋಚಿಸಬೇಕು.
ತಜ್ಞರ ಪ್ರಕಾರ, ತುರ್ತು ನಿಧಿಯನ್ನು ನಮ್ಮ ಉಳಿತಾಯ ಖಾತೆಯಲ್ಲಿ ಎಂದಿಗೂ ಇಟ್ಟುಕೊಳ್ಳಬಾರದು. ಇದನ್ನು ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆ ವೇದಿಕೆಗಳಲ್ಲಿ ಹೂಡಿಕೆ ಮಾಡಬೇಕು. ಇಲ್ಲವೆ ಎಫ್‌ಡಿ ಇಡಬೇಕು. ಇದನ್ನು ಅಗತ್ಯ ಬಿದ್ದಾಗ ಮಾತ್ರ ಬಳಸಬೇಕು. ಅಂದ್ರೆ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ ಮನೆಯ ವೆಚ್ಚ ಭರಿಸಲು ಇದನ್ನು ಬಳಸಬೇಕು. ಇದ್ರಿಂದ ನೀವು ತೆರಿಗೆ ಕೂಡ ಉಳಿಸಬಹುದು.