ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆ ಅಲೆ ಅಬ್ಬರದಿಂದಾಗಿ ಅನೇಕ ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗಿದೆ. ಲಾಕ್ ಡೌನ್ ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಚಿನ್ನದ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ.
ಖರೀದಿದಾರರು ದೂರವುಳಿದ ಕಾರಣ ಭಾರತದಲ್ಲಿ ಇದೇ ಮೊದಲ ಬಾರಿಗೆ ರಿಯಾಯಿತಿ ದರದಲ್ಲಿ ಚಿನ್ನ ಮಾರಾಟವಾಗುತ್ತಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕೆ ನಿರ್ಬಂಧ ಹೇರಲಾಗಿದೆ. ಆಭರಣ ಮಳಿಗೆಗಳು ಮುಚ್ಚಲ್ಪಟ್ಟಿರುವುದರಿಂದ ಚಿನ್ನದ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಮುಂಬೈ ಮೂಲದ ವ್ಯಾಪಾರಿ ಹೇಳಿದ್ದಾರೆ.
ಕಳೆದ ವಾರ ಚಿನ್ನಕ್ಕೆ 2 ಡಾಲರ್ ನಷ್ಟು ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಶೇಕಡ 10.75 ರಷ್ಟು ಆಮದು ಮತ್ತು ಶೇಕಡ 3 ರಷ್ಟು ಮಾರಾಟ ತೆರಿಗೆ ಒಳಗೊಂಡಿವೆ. ಅಧಿಕೃತ ದೇಶಿಯ ಬೆಲೆಗಿಂತ ಔನ್ಸ್ ಗೆ 2 ಡಾಲರ್ ನಷ್ಟು ರಿಯಾಯಿತಿ ನೀಡಲಾಗಿದೆ.
ಬೆಂಗಳೂರು ಮೂಲದ ವ್ಯಾಪಾರಿ ಅಭಿಪ್ರಾಯದಂತೆ, ಚಿನ್ನಾಭರಣ ವರ್ತಕರು ಖರೀದಿಯನ್ನು ಬಹುತೇಕ ನಿಲ್ಲಿಸಿದ್ದಾರೆ. ಲಾಕ್ ಡೌನ್, ಕರ್ಫ್ಯೂ ನಂತಹ ನಿರ್ಬಂಧಗಳ ಕಾರಣ ಮದುವೆ, ಶುಭ ಸಮಾರಂಭಗಳು ಸ್ಥಗಿತಗೊಂಡು ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ. ಆದರೆ, ಯಾವಾಗ ಬೇಡಿಕೆ ಹೆಚ್ಚುತ್ತದೆ ಎನ್ನುವುದು ಗೊತ್ತಿಲ್ಲವೆಂದು ಹೇಳಲಾಗಿದೆ. ಜೂನ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬಳಕೆ ಕುಂಠಿತಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವ ಚಿನ್ನ ಮಂಡಳಿ ತಿಳಿಸಿದೆ.
ಆದರೆ ಇದೇ ವೇಳೆ ಅನೇಕ ದೇಶಗಳಲ್ಲಿ ವ್ಯತಿರಿಕ್ತ ಬೆಳವಣಿಗೆ ನಡೆದಿವೆ. ಚೀನಾದಲ್ಲಿ ಕಳೆದ ವಾರಕ್ಕಿಂತ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಕೊರೋನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಹೀಗಾಗಿ ಚೀನಾದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಮೇ 1 ರಿಂದ 5 ರವರೆಗೆ ಚೀನಾದಲ್ಲಿ ಕಾರ್ಮಿಕರ ದಿನಾಚರಣೆ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಿದೆ. ಸಿಂಗಾಪುರದಲ್ಲಿ ಚಿನ್ನಕ್ಕೆ ಬೇಡಿಕೆ ಇದೆ. ಹಾಂಕಾಂಗ್, ಜಪಾನ್ ನಲ್ಲಿಯೂ ರಜಾದಿನಗಳ ನಡುವೆಯೂ ಚಿನ್ನ ಮಾರಾಟ ಮುಂದುವರೆದಿದೆ.
ಬೆಲೆ ಏರಿಳಿತದ ನಡುವೆಯೂ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ವಾರಕ್ಕಿಂತ ಶೇಕಡ 30 ರಷ್ಟು ಹೆಚ್ಚಾಗಿದೆ ಎಂದು ಗೋಲ್ಡ್ ಸಿಲ್ವರ್ ಸೆಂಟ್ರಲ್‌ನ ವ್ಯವಸ್ಥಾಪಕ ನಿರ್ದೇಶಕ ಬ್ರಿಯಾನ್ ಲ್ಯಾನ್ ಹೇಳಿದ್ದಾರೆ.