ಮೊಬೈಲ್ ಮತ್ತು ಯುಟಿಲಿಟಿ ಬಿಲ್‌ಗಳಿಗಾಗಿ ಸ್ವಯಂ ಡೆಬಿಟ್ ಪೇಮೆಂಟ್ ಸೆಟ್ ಮಾಡಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಸ್ವಯಂ-ಡೆಬಿಟ್ ಪಾವತಿ ಏಪ್ರಿಲ್ 1 ರಿಂದ ವಿಫಲವಾಗುವ ಸಾಧ್ಯತೆಯಿದೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ, ಟಾಟಾ ಪವರ್ ಮತ್ತು ಬಿಎಸ್‌ಇಎಸ್ ಮುಂತಾದ ಕಂಪನಿಗಳ ಮೇಲೆ ಇದು ಪರಿಣಾಮ ಬೀರಲಿದೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗಳಿಗಾಗಿ ಎಎಫ್‌ಎ ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 31ರವರೆಗೆ ಗಡುವು ನೀಡಿತ್ತು. ಏಪ್ರಿಲ್ 1ರಿಂದ ಲಕ್ಷಾಂತರ ಗ್ರಾಹಕರಿಗೆ ಇದ್ರಿಂದ ತೊಂದರೆಯಾಗಲಿದೆ. ಹೆಚ್ಚಿನ ಪ್ರಮುಖ ಬ್ಯಾಂಕುಗಳು ಆರ್‌ಬಿಐ ನಿಯಮಗಳನ್ನು ಪಾಲಿಸಿಲ್ಲ. ಈ ನಿರ್ಧಾರದಿಂದ 2 ಸಾವಿರ ಕೋಟಿ ಪೇಮೆಂಟ್ ಮೇಲೆ ಪರಿಣಾಮ ಬೀರಲಿದೆ. ಮೊಬೈಲ್ ಬಿಲ್, ಯುಟಿಲಿಟಿ ಬಿಲ್, ಒಟಿಟಿ, ಮಾಧ್ಯಮ ಚಂದಾದಾರಿಕೆ ಸೇರಿದಂತೆ ಎಲ್ಲ ಪಾವತಿಗಳ ಮೇಲೆ ಇದು ಪರಿಣಾಮ ಬೀರಲಿದೆ.
ಹೊಸ ನಿಯಮದ ಪ್ರಕಾರ, ಪಾವತಿಯನ್ನು ಕಡಿತಗೊಳಿಸುವ 5 ದಿನಗಳ ಮೊದಲು ಬ್ಯಾಂಕುಗಳು ಗ್ರಾಹಕರಿಗೆ ಅಧಿಸೂಚನೆಯನ್ನು ಕಳುಹಿಸಬೇಕು. ಗ್ರಾಹಕರು ಅದನ್ನು ಅನುಮೋದಿಸಿದ ನಂತರವೇ ಹಣ ಕಡಿತವಾಗಲಿದೆ. 5,000 ರೂಪಾಯಿಗಿಂತ ಹೆಚ್ಚಿನ ಪೇಮೆಂಟ್ ಗೆ ಬ್ಯಾಂಕುಗಳು ಗ್ರಾಹಕರಿಗೆ ಒನ್-ಟೈಮ್ ಪಾಸ್ವರ್ಡ್ ಕಳುಹಿಸಬೇಕಾಗುತ್ತದೆ. ಅನೇಕ ಬ್ಯಾಂಕ್ ಗಳಲ್ಲಿ ಇದನ್ನು ಶುರು ಮಾಡುವ ಸೌಲಭ್ಯವಿಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತಹ ಬ್ಯಾಂಕುಗಳು ಇದನ್ನು ಜಾರಿಗೆ ತರಲು ಅಸಮರ್ಥವಾಗಿವೆ. ಹಾಗಾಗಿ ಗ್ರಾಹಕರಿಗೆ ಪರ್ಯಾಯ ಪೇಮೆಂಟ್ ವಿಧಾನಗಳ ಬಗ್ಗೆ ಸಲಹೆ ನೀಡ್ತಿವೆ.