ನವದೆಹಲಿ: 6 ವರ್ಷಗಳ ಹಿಂದೆ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ 2000 ರೂ. ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ಮಾರುಕಟ್ಟೆಯಿಂದ ಹಿಂಪಡೆಯಬೇಕೆಂದು ಬಿಜೆಪಿ ಸಂಸದ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಬಹುತೇಕ ಎಟಿಎಂಗಳಿಂದ ಕಣ್ಮರೆಯಾಗಿದ್ದು, ಸದ್ಯದಲ್ಲೇ ಅವು ಬದಲಾವಣೆ ಕಳೆದುಕೊಳ್ಳುತ್ತವೆ ಎನ್ನುವ ವದಂತಿ ಹರಡಿದೆ ಎಂದರು.
ಆರ್‌ಬಿಐ ಕಳೆದ ಮೂರು ವರ್ಷಗಳಿಂದ 2,000 ರೂ. ಮುಖಬೆಲೆಯ ನೋಟು ಮುದ್ರಣ ಮಾಡಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
2000 ರೂ. ನೋಟುಗಳನ್ನು ಹಣ ಸಂಗ್ರಹಿಸಿ ಇಡಲು ಬಳಸಲಾಗುತ್ತಿದ್ದು, ಹಂತ ಹಂತವಾಗಿ ಅವುಗಳನ್ನು ವಾಪಸ್ ಪಡೆಯಬೇಕು. ನೋಟು ವಿನಿಮಯಕ್ಕೆ ಎರಡು ವರ್ಷ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.