ನವದೆಹಲಿ: ಉದ್ಯೋಗಿಗಳ ನಿವೃತ್ತಿ ನಿಧಿ ಸಂಸ್ಥೆ EPFO 2021 -22 ನೇ ಸಾಲಿನ ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡ 8.5 ರಿಂದ 8.1 ಕ್ಕೆ ಕಡಿತಗೊಳಿಸಿದೆ. ಕಳೆದ ನಾಲ್ಕು ದಶಕಗಳಲ್ಲಿ ಈ ಬಡ್ಡಿ ದರ ಕನಿಷ್ಠ ಮಟ್ಟದ್ದಾಗಿದೆ. 6 ಕೋಟಿ ಪಿಎಫ್ ವೇತನದಾರರಿಗೆ ಇದರ ಮೇಲೆ ಪರಿಣಾಮ ಬೀರಲಿದೆ.
1977 -79 ರಿಂದ ಈಚೆಗೆ ಕನಿಷ್ಠ ಬಡ್ಡಿದರ ಇದಾಗಿದೆ. ವೇತನವನ್ನೇ ನಂಬಿಕೊಂಡ ಮಧ್ಯಮ ವರ್ಗದ ಜನರಿಗೆ ಆದಾಯದಲ್ಲಿ ಕಡಿತವಾಗಲಿದೆ. ಶನಿವಾರ ಗುವಾಹಟಿಯಲ್ಲಿ ನಡೆದ EPFO ಮಂಡಳಿ ಸಭೆಯಲ್ಲಿ ಕಾರ್ಮಿಕ ಒಕ್ಕೂಟಗಳ ವಿರೋಧದ ನಡುವೆಯೂ ಹಣಕಾಸು ಸಚಿವಾಲಯ ಬಡ್ಡಿದರ ಕಡಿತಗೊಳಿಸಿದೆ.
ಇದಕ್ಕೆ ಕಾಂಗ್ರೆಸ್, ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ನಂತರ ಬಿಜೆಪಿ ಜನತೆಗೆ ನೀಡಿದ ಕೊಡುಗೆ ಇದಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಪಿಎಫ್ ಬಡ್ಡಿ ದರ ಕಡಿತ ಮಾಡಿ ದುಡಿಯುವ ವರ್ಗದ ಜನತೆಗೆ ಕೇಂದ್ರ ಸರ್ಕಾರ ಭಾರಿ ಹೊಡೆತ ಕೊಟ್ಟಿದೆ ಎಂದು ಸಿಪಿಐ(ಎಂ) ತಿಳಿಸಿದೆ.