ಕೊರೊನಾದಿಂದಾಗಿ ಈಗಾಗಲೇ ಅನೇಕ ನೌಕರರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಒಂದು ಕಡೆ ಕೊರೊನಾ ಹಾವಳಿಯಾದರೆ ಮತ್ತೊಂದು ಕಡೆ ಜೀವನಕ್ಕಾಧಾರವಾಗಿದ್ದ ಕೆಲಸಕ್ಕೆ ಕತ್ತರಿ ಹಾಕಿರುವುದು. ಇನ್ನೊಂದು ಕಡೆ ಕೆಲಸ ಇದ್ದರೂ ಸರಿಯಾಗಿ ಸಂಬಳ ಕೈಸೇರದೇ ಇರುವುದು.
ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದರ ಬೆನ್ನಲ್ಲೇ ಇಪಿಎಫ್ ಹಣ ಪಾವತಿಸದೇ ಇದ್ದರೆ ದಂಡ ಬೀಳಬಹುದು ಎಂಬ ಆತಂಕ ಕೂಡ ಇದೆ. ಹೀಗಾಗಿ ಸರ್ಕಾರ ಇದಕ್ಕೆ ಪರಿಹಾರ ನೀಡುತ್ತಾ ಅನ್ನೋ ನಿರೀಕ್ಷೆಯಲ್ಲಿವೆ ಕಂಪನಿಗಳು.
ಪಿಎಫ್ ಹಣವನ್ನು ಪಾವತಿ ಮಾಡದೇ ಇದ್ದರೆ ಕಂಪನಿಗಳಿಗೆ ದಂಡ ಮತ್ತು ಬಡ್ಡಿ ಹಾಕಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಅನೇಕ ಕಂಪನಿಗಳು ಬೀದಿಗೆ ಬಿದ್ದಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ಇವರಿಗೆ ಪರಿಹಾರ ನೀಡುವ ಚಿಂತನೆ ನಡೆಸಿದೆ. ದಂಡ ಮತ್ತು ಬಡ್ಡಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದನ್ನು ನೀಡಿದ್ದೇ ಆಗಿದ್ದಲ್ಲಿ ಕಂಪನಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗುತ್ತದೆ.
ಇನ್ನು ಸರ್ಕಾರದ ಈ ನಿರ್ಧಾರದಿಂದ 4.3 ಕೋಟಿ ಉದ್ಯೋಗಿಗಳಿಗೆ ಮತ್ತು 6.5 ಲಕ್ಷ ಕಂಪನಿಗಳಿಗೆ ಪ್ರಯೋಜನವಾಗುತ್ತದೆ. ಪರಿಹಾರ ನೀಡುವುದರಿಂದ ನೌಕರರಿಗೆ ಸರಿಯಾದ ರೀತಿಯಲ್ಲಿ ಕಂಪನಿಗಳು ಸಂಬಳ ನೀಡುತ್ತವೆ ಎಂಬ ನಿಟ್ಟಿನಲ್ಲಿ ಈ ಚಿಂತನೆ ಮಾಡಲಾಗಿದೆ.