ನವದೆಹಲಿ: ಅಗತ್ಯ ವಸ್ತು, ವಿದ್ಯುತ್ ಮೊದಲಾದವುಗಳ ಬೆಲೆ ಏರಿಕೆ ನಡುವೆ ಜನಸಾಮಾನ್ಯರು ತತ್ತರಿಸಿಹೋಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ.
ಪೆಟ್ರೋಲ್ ಲೀಟರ್ ಗೆ 29 ಪೈಸೆ ಮತ್ತು ಡೀಸೆಲ್ ಲೀಟರಿಗೆ 28 ಪೈಸೆ ಹೆಚ್ಚಳ ಮಾಡಲಾಗಿದೆ. ಕೊರೋನಾದಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಪ್ರತಿದಿನ ಬೆಲೆ ಏರಿಕೆ ಶಾಕ್ ಎದುರಾಗಿದೆ. ಈಗಾಗಲೇ 100 ರೂಪಾಯಿ ಗಡಿ ದಾಟಿರುವ ಪೆಟ್ರೋಲ್ ದರ ಇಂದು ಮತ್ತೆ ಏರಿಕೆಯಾಗಿ ದಾಖಲೆ ಬರೆದಿದೆ.
ಮೇ 4 ರಿಂದ 23 ಬಾರಿ ತೈಲ ದರ ಹೆಚ್ಚಿಸಲಾಗಿದೆ. ದರ ಪರಿಷ್ಕರಣೆ ಪ್ರಾರಂಭವಾದಾಗಿನಿಂದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 5.30 ರೂ., ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 5.84 ರೂ. ಜಾಸ್ತಿಯಾಗಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಹೆಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸುತ್ತವೆ.