ನವದೆಹಲಿ: ದೀಪಾವಳಿ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಂಕ ಪರಿಷ್ಕರಣೆ ಮಾಡಿದ ನಂತರ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿವೆ. ಇಂಧನ ದರ ಬದಲಾಗದೇ ಉಳಿದಿದ್ದು, ಸ್ಥಳೀಯ ತೆರಿಗೆಗಳ ಆಧರಿಸಿ ಚಿಲ್ಲರೆ ದರದಲ್ಲಿ ಬದಲಾವಣೆ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ನಿರಂತರ ಇಳಿಕೆಯಾದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲಾಗುವುದು. ಬ್ರೆಂಟ್ ಕಚ್ಚಾ ತೈಲ ದರ ಶುಕ್ರವಾರ ಪ್ರತಿ ಬ್ಯಾರಲ್ ಗೆ 4 ಡಾಲರ್ ನಷ್ಟು ಹೇಳಿಕೆಯಾಗಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ತಗ್ಗಿಸಿಲ್ಲ.
ಹಿಂದಿನ 15 ದಿನಗಳ ಜಾಗತಿಕ ಇಂಧನದ ಸರಾಸರಿಯನ್ನು ಆಧರಿಸಿ ರಿಟೇಲ್ ಮಾರಾಟ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪರಿಷ್ಕರಿಸುತ್ತವೆ. ಈ ಕಾರಣದಿಂದಾಗಿ ಸದ್ಯಕ್ಕೆ ದರದಲ್ಲಿ ಬದಲಾವಣೆ ಆಗಿಲ್ಲ. ಆದರೆ, ನಿರಂತರವಾಗಿ ಕಚ್ಚಾತೈಲದ ಬೆಲೆ ಕಡಿಮೆಯಾದಲ್ಲಿ ದೇಶೀಯವಾಗಿಯೂ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.