ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
2022 ರಲ್ಲಿ ಕಚ್ಚಾ ತೈಲ ದರ ಭಾರಿ ಏರಿಕೆ ಕಂಡಾಗ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಗೆ 17 ರೂಪಾಯಿ, ಡೀಸೆಲ್ ಗೆ 35 ರೂ. ವರೆಗೂ ನಷ್ಟ ಅನುಭವಿಸಿದ್ದವು. ಆದರೆ, ನಂತರ ದರದಲ್ಲಿ ಭಾರಿ ಇಳಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಗೆ 7-10 ರೂಪಾಯಿ, ಡೀಸೆಲ್ ಗೆ 3-4 ರೂಪಾಯಿ ಲಾಭ ಪಡೆದುಕೊಳ್ಳುತ್ತಿವೆ. ಕಳೆದ ಮೂರು ತಿಂಗಳಲ್ಲಿ ಸುಮಾರು 28,000 ಕೋಟಿ ರೂ. ಲಾಭ ಮಾಡಿಕೊಂಡಿವೆ.
ಈಗ ಕಚ್ಚಾ ತೈಲ ದರ ಈಗ ಭಾರಿ ಇಳಿಕೆ ಕಂಡಿದೆ. ಲೋಕಸಭೆ ಚುನಾವಣೆಯೂ ಸಮೀಪದಲ್ಲಿದೆ. ತೈಲ ದರ ಇಳಿಕೆಯಿಂದ ಹಣದುಬ್ಬರದ ಮೇಲೆಯೂ ಕಡಿವಾಣ ಹಾಕಬಹುದು. ಇವೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.