ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೂ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿದೆ.
5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಕಳೆದ 24 ದಿನಗಳಿಂದ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಕಡಿಮೆಯಾಗಿದೆ. ಲೀಟರ್ ಪೆಟ್ರೋಲ್ ದರ 18 ಪೈಸೆ ಮತ್ತು ಡೀಸೆಲ್ ಲೀಟರ್ ಗೆ 17 ಪೈಸೆಯಷ್ಟು ಕಡಿಮೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 90.99 ರೂ.ಗೆ ಇಳಿದಿದ್ದು, ಡೀಸೆಲ್ ಲೀಟರ್ ಗೆ 81.30 ರೂಪಾಯಿಗೆ ಇಳಿಕೆಯಾಗಿದೆ.
ಅಂದ ಹಾಗೇ, 2020 ರ ಮಾರ್ಚ್ 16 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲಾಗಿತ್ತು. ಅದಾಗಿ ಒಂದು ವರ್ಷ ದಾಟಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 21.58 ರೂಪಾಯಿ, ಡೀಸೆಲ್ ಲೀಟರ್ ಗೆ 19.18 ರೂ.ನಷ್ಟು ಹೆಚ್ಚಳ ಆಗಿದೆ.
ಮಾರ್ಚ್ 23 ರಂದು ಜಾಗತಿಕ ಮಾರುಕಟ್ಟೆಯಲ್ಲಿ WTI ಕಚ್ಚಾ ತೈಲ ದರ ಬ್ಯಾರಲ್ ಗೆ 57.76 ಡಾಲರ್ ಗೆ ಇಳಿಕೆಯಾಗಿದೆ. ಬ್ರೆಂಟ್ ಮಾದರಿ ಕಚ್ಚಾತೈಲ ದರ ಬ್ಯಾರಲ್ ಗೆ 60.79 ಡಾಲರ್ ಗೆ ಇಳಿಕೆಯಾಗಿದೆ. ಇದರೊಂದಿಗೆ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ತೈಲ ದರ ಇಳಿಕೆ ಮಾಡಲಾಗಿದೆ.