ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಇವತ್ತು ಇಂಧನ ದರವನ್ನು ಪರಿಷ್ಕರಣೆ ಮಾಡದಿರಲು ನಿರ್ಧರಿಸಿವೆ. ಹೀಗಾಗಿ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಭಾನುವಾರ ದರ ಪರಿಷ್ಕರಣೆ ಆದ ನಂತರ ಮುಂಬೈನಲ್ಲಿ ಪೆಟ್ರೋಲ್ ದರ 100 ರೂಪಾಯಿ ಸನಿಹಕ್ಕೆ ಬಂದಿದೆ. 100 ರೂ.ಗೆ ಕೇವಲ 51 ಪೈಸೆ ಕಡಿಮೆ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 93.21 ರೂ. ಮತ್ತು 84.07 ರೂ. ಇದೆ.
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ 99.49 ರೂ. ಗೆ ಮಾರಾಟವಾಗುತ್ತಿದೆ. ಡೀಸೆಲ್ 91.30 ರೂ. ತಲುಪಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಮುಂಬೈನಲ್ಲಿ ಕೂಡ 100 ರೂ. ಸನಿಹಕ್ಕೆ ಬಂದಿದೆ.
ಸ್ಥಳೀಯ ತೆರೆಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ರಾಜಸ್ಥಾನವು ದೇಶದಲ್ಲಿ ಅತಿ ಹೆಚ್ಚು ಮೌಲ್ಯ ವರ್ಧಿತ ತೆರಿಗೆ ವಿಧಿಸುತ್ತದೆ. ನಂತರದಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಇವೆ.
ಕಳೆದ ವರ್ಷದ ಮಾರ್ಚ್ ನಿಂದ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆಯು ಶೇಕಡ 60 ರಷ್ಟು ಮತ್ತು ಡೀಸೆಲ್ ನ ಶೇಕಡ 54ಕ್ಕಿಂತ ಹೆಚ್ಚು ಇದೆ.