
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 5 ರುಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 90 ರೂ., ಬೆಂಗಳೂರಿನಲ್ಲಿ 87.04 ರೂಪಾಯಿ ಗರಿಷ್ಠ ಮಟ್ಟ ತಲುಪಿ ಗ್ರಾಹಕರಿಗೆ ಹೊರೆಯಾಗಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಪೆಟ್ರೋಲಿಯಂ ಸಚಿವಾಲಯ ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದು ಗ್ರಾಹಕರಿಗೆ ಪರಿಹಾರವಾಗಿ ಪೆಟ್ರೋಲಿಯಂ ಸಚಿವಾಲಯದ ಶಿಫಾರಸುಗಳನ್ನು ಒಪ್ಪಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 5 ರೂಪಾಯಿ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಕಾರಣದಿಂದ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಪೆಟ್ರೋಲಿಯಂ ಸಚಿವಾಲಯ ಶಿಫಾರಸು ಮಾಡಿದ್ದು, ಪೆಟ್ರೋಲ್, ಡೀಸೆಲ್ 5 ರೂ. ಅಗ್ಗವಾಗಬಹುದು.
ದೇಶವ್ಯಾಪಿ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರಗಳು ಕೂಡ ವ್ಯಾಟ್ ಹೆಚ್ಚಳ ಮಾಡಿದ್ದವು. ಈಗ ಬೆಲೆ ತೀವ್ರಗತಿಯಲ್ಲಿ ಏರಿಕೆಯಾಗಿರುವುದರಿಂದ ಬೆಲೆ ಕಡಿತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬಹುದು ಎಂದು ಹೇಳಲಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಜನರ ಆದಾಯದ ಮೇಲೆಯೂ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶೇಕಡ 20 ರಷ್ಟು ಕಡಿಮೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲಾಕ್ಡೌನ್ ವೇಳೆ ಏರಿಕೆ ಮಾಡಿದ್ದ ಅಬಕಾರಿ ಸುಂಕವನ್ನು ಶೇಕಡ 50 ರಷ್ಟು ಕಡಿತಗೊಳಿಸುವ ಸಾಧ್ಯತೆ ಇದ್ದು, ಲೀಟರ್ ಗೆ 5 ರೂ. ಕಡಿಮೆಯಾಗಬಹುದೆಂದು ಹೇಳಲಾಗಿದೆ.