ನವದೆಹಲಿ: ರಷ್ಯಾ -ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಭಾರತದ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 20-22 ರೂ. ಹೆಚ್ಚಾಗಬಹುದು.
ಅಬಕಾರಿ ಸುಂಕ ಕಡಿತವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು, ಆದರೆ, ಸಂಪೂರ್ಣವಾಗಿ ಅಲ್ಲ ಎನ್ನುವುದನ್ನು ಗಮನಿಸಬೇಕಿದೆ.
ಯುದ್ಧ ಬಿಕ್ಕಟ್ಟು ಮತ್ತು ಕಡಿಮೆ ಪೂರೈಕೆಯ ಭಯವು ಬ್ರೆಂಟ್ ಕಚ್ಚಾ ತೈಲ ಬೆಲೆಯನ್ನು ಬುಧವಾರ ಸುಮಾರು 8 ವರ್ಷಗಳ ಗರಿಷ್ಠ ಮಟ್ಟಕ್ಕೆ ತಳ್ಳಿದೆ. ಪರಿಣಾಮವಾಗಿ, ಬಿಗಿಯಾದ ಪೂರೈಕೆಯ ಭಯದಿಂದ ಕಳೆದ ಎರಡು ದಿನಗಳಲ್ಲಿ ಕಚ್ಚಾ ತೈಲ ಬೆಲೆಗಳು ಸುಮಾರು 15 ಪ್ರತಿಶತದಷ್ಟು ಏರಿಕೆಯಾಗಿದೆ. ಬುಧವಾರ, ಬ್ರೆಂಟ್ ಸೂಚ್ಯಂಕ ಕಚ್ಚಾ ತೈಲ ಬೆಲೆಗಳು ಬುಧವಾರ ಪ್ರತಿ ಬ್ಯಾರೆಲ್‌ಗೆ 111 ಡಾಲರ್ ಗೆ ಏರಿದೆ.
ಸೋಮವಾರದ ಪ್ರತಿ ಬ್ಯಾರೆಲ್‌ಗೆ 98 ಡಾಲರ್ ನಿಂದ ಮಂಗಳವಾರ ಪ್ರತಿ ಬ್ಯಾರೆಲ್‌ಗೆ 102 ಡಾಲರ್ ಗೆ ಏರಿಕೆಯಾಗಿದೆ.
ಪ್ರಸ್ತುತ, ರಷ್ಯಾ ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ.
ರಷ್ಯಾದ ವಿರುದ್ಧದ ನಿರ್ಬಂಧಗಳು ಜಾಗತಿಕ ಪೂರೈಕೆಗಳನ್ನು ಮೊಟಕುಗೊಳಿಸುತ್ತದೆ ಮತ್ತು ಬೆಳವಣಿಗೆಯನ್ನು ನಿಗ್ರಹಿಸುತ್ತದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ, ಭಾರತವು ವಿಶ್ವದಲ್ಲೇ ಪ್ರಮುಖ ಕಚ್ಚಾ ತೈಲ ಆಮದುದಾರನಾಗಿದ್ದು, OMC ಗಳು ಪರಿಷ್ಕರಿಸಲು ನಿರ್ಧರಿಸಿದರೆ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಬೆಲೆಗಳಲ್ಲಿ 20 ರಿಂದ 22 ರೂ.ಗೆ ಏರಿಸುವ ಸಾಧ್ಯತೆಯಿರುವುದರಿಂದ ರಾಕೆಟ್ ವೇಗದಲ್ಲಿ ಬೆಲೆ ಏರಿಕೆಯಾಗಬಹುದು.
ಒಎಂಸಿಗಳು ಇಂಧನ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ತೈಲ ಬೆಲೆಯಲ್ಲಿನ ಇತ್ತೀಚಿನ ಏರಿಕೆಯು ದೇಶೀಯ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 20 ರೂ. ಏರಿಕೆಯಾಗಬಹುದು ಎಂದು ಹೆಚ್.ಡಿ.ಎಫ್.ಸಿ. ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ(ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.
ಇತ್ತೀಚೆಗೆ, ಕಳೆದ 3 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿ ಸ್ಥಿರವಾಗಿವೆ.
ಜನವರಿ 2022 ರಲ್ಲಿ, ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ ಸರಾಸರಿ 85.5 ಡಾಲರ್ ಆಗಿತ್ತು. ಆ ತಿಂಗಳಲ್ಲಿ, ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ಲೀಟರ್ ಗೆ 95.4 ರೂ. ಮತ್ತು 86.7 ರೂ. ದರ ಇತ್ತು.
ತೈಲ ಬೆಲೆಯು ಬ್ಯಾರೆಲ್ ಗೆ 100 ಡಾಲರ್ ಸಮೀಪದಲ್ಲಿ ಮುಂದುವರಿದರೆ, ಪೆಟ್ರೋಲ್ ಬೆಲೆಗಳು ಪ್ರತಿ ಲೀಟರ್‌ಗೆ ಸುಮಾರು 9-12 ರೂಪಾಯಿಗಳ ಬೆಲೆ ಏರಿಕೆಗೆ ಸಾಕ್ಷಿಯಾಗಬಹುದು ಎಂದು ಕ್ರಿಸಿಲ್ ರಿಸರ್ಚ್‌ನ ನಿರ್ದೇಶಕ ಹೇತಲ್ ಗಾಂಧಿ ಹೇಳಿದ್ದಾರೆ.
5 ರಾಜ್ಯಗಳ ಚುನಾವಣೆ ಕೊನೆ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ರಾಕೆಟ್ ವೇಗದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲಿದೆ ಎನ್ನಲಾಗಿದೆ.