ನವದೆಹಲಿ: ಒಂದು ದಿನದ ವಿರಾಮದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಈ ತಿಂಗಳಲ್ಲಿ 9ನೇ ಬಾರಿಗೆ ಇಂಧನ ದರ ಏರಿಕೆ ಮಾಡಲಾಗಿದೆ.
ಭಾನುವಾರವೂ ಮತ್ತೆ ತೈಲ ದರ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ದರ ಲೀಟರಿಗೆ 24 ಪೈಸೆ ಮತ್ತು ಡೀಸೆಲ್ ದರ 27 ಪೈಸೆಯಷ್ಟು ಹೆಚ್ಚಳವಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದ ಹಲವು ನಗರಗಳಲ್ಲಿ ಈಗಾಗಲೇ ಇಂಧನ ದರ 100 ರೂಪಾಯಿ ಗಡಿದಾಟಿದೆ. ಮುಂಬೈನಲ್ಲಿ ಕೂಡ ಪೆಟ್ರೋಲ್ ದರ 100 ರೂಪಾಯಿ ಸನಿಹಕ್ಕೆ ತಲುಪಿದೆ. ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನಗಳು ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ರಾಜಸ್ಥಾನವು ದೇಶದಲ್ಲಿ ಪೆಟ್ರೋಲ್ ಮೇಲೆ ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆ(ವ್ಯಾಟ್) ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ. ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆ ಮೇಲೆ ಶೇಕಡ 60 ರಷ್ಟು ಮತ್ತು ಡೀಸೆಲ್ ಮೇಲೆ ಶೇಕಡ 54 ಕ್ಕಿಂತ ಹೆಚ್ಚು ತೆರಿಗೆ ವಿಧಿಸುತ್ತವೆ.
ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಗೆ 32.90 ರೂ. ಮತ್ತು ಡೀಸೆಲ್ ಗೆ 31.80 ರೂ. ಅಬಕಾರಿ ಸುಂಕ ವಿಧಿಸುತ್ತದೆ. ಈ ತಿಂಗಳಲ್ಲಿ 9 ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ.