ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಮಂಗಳವಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 25 ಪೈಸೆ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 30 ಪೈಸೆಯಷ್ಟು ಹೆಚ್ಚಳವಾಗಿದೆ.
ದರ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ಗರಿಷ್ಟಮಟ್ಟಕ್ಕೇರಿದ್ದು 102. 4 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ 108.67 ರೂ.ಗೆ ತಲುಪಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ 103.36 ರೂ., ಚೆನ್ನೈನಲ್ಲಿ ಪೆಟ್ರೋಲ್‌ಗೆ 100.23 ರೂ. ಇದೆ. ಸ್ಥಳೀಯ ತೆರಿಗೆಗಳ ಆಧರಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಜಾಗತಿಕ ಉತ್ಪಾದನೆಯ ಅಡ್ಡಿಗಳಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.
ಅಂತಾರಾಷ್ಟ್ರೀಯ ತೈಲ ಬೆಲೆಗಳು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ ನಂತರ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (HPCL) ಸೆಪ್ಟೆಂಬರ್ 24 ರಂದು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿವೆ. ಜಾಗತಿಕ ಮಾನದಂಡದ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 78 ಡಾಲರ್ ಗಿಂತ ಹೆಚ್ಚಾಗಿದೆ.
ಜುಲೈ ಮತ್ತು ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ತೈಲ ದರ ಕಡಿಮೆಯಾದಾಗ, ದೆಹಲಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ಪ್ರತಿ ಲೀಟರ್‌ಗೆ 65 ಪೈಸೆ ಮತ್ತು 1.25 ರೂ. ಇಳಿಕೆಯಾಗಿವೆ.
ಅದಕ್ಕೂ ಮೊದಲು ಮೇ 4 ಮತ್ತು ಜುಲೈ 17 ರ ನಡುವೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 11.44 ರೂ. ಹೆಚ್ಚಿಸಲಾಗಿತ್ತು. ಈ ಅವಧಿಯಲ್ಲಿ ಡೀಸೆಲ್ ದರವು 9.14 ರೂ. ಏರಿಕೆಯಾಗಿತ್ತು.
ಭಾರತವು ತನ್ನ ಅಗತ್ಯತೆಯ ಶೇಕಡ 85 ರಷ್ಟು ತೈಲ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಸ್ಥಳೀಯ ಇಂಧನ ದರಗಳನ್ನು ಅಂತರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ.