ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಸತತ 18ನೇ ದಿನ ಡೀಸೆಲ್ ಬೆಲೆ ಏರಿಕೆಯಾಗಿದೆ.
ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಡೀಸೆಲ್ ಬೆಲೆ 48 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 48 ಪೈಸೆ ಜಾಸ್ತಿಯಾಗಿದ್ದು 79.88 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಡೀಸೆಲ್ ಗೆ 75.96 ರೂಪಾಯಿ ಇದೆ. ಪೆಟ್ರೋಲ್ ಬೆಲೆಯಲ್ಲಿ ಇಂದು ಯಾವುದೇ ದರ ಪರಿಷ್ಕರಣೆ ಮಾಡಲಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಗೆ 82.35 ದರ ಇದೆ. ದೇಶಾದ್ಯಂತ ದರ ಹೆಚ್ಚಳ ಆಗಿದ್ದು ಸ್ಥಳೀಯ ಮಾರಾಟ ತೆರಿಗೆ, ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.
ಡೀಸೆಲ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕಾರಣ ಸರಕು ಸಾಗಣೆ ವಾಹನಗಳ ಬಾಡಿಗೆ ಹೆಚ್ಚಾಗಿದೆ. ಅನೇಕ ವಾಹನಗಳು, ಟ್ರಕ್ ಗಳ ಸಂಚಾರ ಸ್ಥಗಿತಗೊಂಡಿದೆ. ಡೀಸೆಲ್ ಬೆಲೆ ಲೀಟರ್ ಗೆ 10 ರೂಪಾಯಿಗಿಂತಲೂ ಹೆಚ್ಚಾಗಿದ್ದು, ಟೋಲ್ ಶುಲ್ಕ, ನಿರ್ವಹಣಾ ವೆಚ್ಚ ಕಾರಣದಿಂದ ಸರಕು ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇದರ ಪರಿಣಾಮ ಜನಸಾಮಾನ್ಯರ ಮೇಲಾಗಲಿದೆ. ಮೊದಲೇ ಲಾಕ್ ಡೌನ್ ನಿಂದ ತತ್ತರಿಸಿದ ಜನತೆಗೆ ಈಗ ಬೆಲೆ ಏರಿಕೆ ಬಿಸಿ ತಟ್ಟಿದೆ ಎನ್ನಲಾಗಿದೆ.