ನವದೆಹಲಿ: ಕಚ್ಚಾ ತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ 15 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಆದರೂ, ಪೆಟ್ರೋಲ್ ಮತ್ತು ಡೀಸೆಲ್ ದರ ಯಥಾ ಸ್ಥಿತಿಯಲ್ಲಿದೆ.
2022ರ ಏಪ್ರಿಲ್ -ಮೇನಲ್ಲಿ ದಾಖಲೆಯ ಮಟ್ಟಕ್ಕೆ ಜಿಗಿತ ಕಂಡಿದ್ದ ಕಚ್ಚಾ ತೈಲ ದರ ಜುಲೈನಿಂದ ಇಳಿಮುಖವಾಗಿಯೇ ಇದೆ. ಆದರೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿಲ್ಲ. ಸಿಲಿಂಡರ್ ದರ ಕೂಡ ಏರುಗತಿಯಲ್ಲಿ ಸಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ ದೇಶೀಯವಾಗಿ ಇಂಧನ ದರ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. 2021 ರಿಂದ ಮಾರ್ಚ್ 2023ರ ವರೆಗೆ ಶೇಕಡ 23ರಷ್ಟು ಕಚ್ಚಾ ತೈಲ ದರ ಏರಿಕೆಯಾಗಿದ್ದರೂ ಪೆಟ್ರೋಲಿಯಂ ಮಾರಾಟ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿಲ್ಲ. ಒಟ್ಟಾರೆಯಾಗಿ ತೈಲ ಕಂಪನಿಗಳು 18,622 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಲಿಖಿತ ಉತ್ತರ ನೀಡಿದೆ. ಈ ಅವಧಿಯಲ್ಲಿ ವಾಸ್ತವವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದರ ಇಳಿಕೆಯಾಗಿದ್ದು, ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾತೈಲವನ್ನು ಖರೀದಿಸಲಾಗಿದೆ. ಆದರೂ, ವಾಣಿಜ್ಯ ಬಳಕೆ ಮತ್ತು ಗೃಹಬಳಕೆ ಸಿಲಿಂಡರ್ ದರವನ್ನು ಬಾರಿ ಹೆಚ್ಚಳ ಮಾಡಲಾಗಿದೆ.
ಡೀಸೆಲ್ ದರ ಇಳಿಕೆಯಾದಲ್ಲಿ ಸಾಗಾಣೆ ದರ ಕಡಿಮೆಯಾಗಿ ಸರಕು ಸಾಮಗ್ರಿ ಬೆಲೆ ಕೂಡ ಕಡಿಮೆಯಾಗುತ್ತದೆ. ಆದರೆ, ಸರ್ಕಾರ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆರ್.ಬಿ.ಐ. ರೆಪೊ ದರ ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.