ನವದೆಹಲಿ: ಕಚ್ಚಾ ತೈಲ ದರ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ತೈಲ ಕಂಪನಿಗಳು ಚಿಂತನೆ ನಡೆಸಿವೆ. ಪೆಟ್ರೋಲ್ ದರ ಲೀಟರ್ ಗೆ 6 ರೂಪಾಯಿ ಹಾಗೂ ಡೀಸೆಲ್ ದರ ಲೀಟರ್ ಗೆ 3 ರೂಪಾಯಿ ಇಳಿಕೆಯಾಗುವ ಸಂಭವ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಗಣನೀಯವಾಗಿ ಕುಸಿತ ಕಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಇದರ ಲಾಭವನ್ನು ಜನಸಾಮಾನ್ಯರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ಆರ್ಥಿಕ ವರ್ಷದ ಆರಂಭದಲ್ಲಿ ತೈಲ ಕಂಪನಿಗಳು ನಷ್ಟದಲ್ಲಿದ್ದವು. ಕಳೆದ ಎರಡು ತ್ರೈಮಾಸಿಕಗಳಲ್ಲಿ ಈ ನಷ್ಟವನ್ನು ತೈಲ ಕಂಪನಿಗಳು ತುಂಬಿಕೊಂಡಿದ್ದು, ಮೂರನೇ ತ್ರೈಮಾಸಿಕದಲ್ಲಿ ಅಲ್ಪ ಲಾಭ ದಾಖಲಿಸಿದೆ. ಮಾರ್ಚ್ ಗೆ ಅಂತ್ಯಗೊಂಡ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಗಳು ಹೆಚ್ಚಿನ ಲಾಭ ಗಳಿಸಿವೆ. ಜನವರಿಯಿಂದ ಮಾರ್ಚ್ ವರೆಗೆ ಕಚ್ಚಾ ತೈಲದ ಬೆಲೆ 80 ಡಾಲರ್ ಆಸುಪಾಸಿನಲ್ಲಿದ್ದು, ಮೇ ವೇಳೆಗೆ 75 ಡಾಲರ್ ಗಿಂತ ಕೆಳಗಿಳಿದಿದೆ.
ಕಳೆದ ವರ್ಷ ಜೂನ್ ನಲ್ಲಿ ಪ್ರತಿ ಬ್ಯಾರೆಲ್ ಗೆ 116 ಡಾಲರ್ ಇದ್ದ ಕಚ್ಚಾತೈಲದ ದರ ಭಾರಿ ಕಡಿಮೆಯಾಗಿದ್ದು, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿದ್ದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದೆ.
2022ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿ ಲೀಟರ್ ಪೆಟ್ರೋಲ್ ಅನ್ನು 16 ರೂಪಾಯಿ ಮತ್ತು ಡೀಸೆಲ್ ಅನ್ನು 23 ರೂಪಾಯಿ ನಷ್ಟದಲ್ಲಿ ಮಾರಾಟ ಮಾಡಿದೆ. ಮೇ ತಿಂಗಳಿನಿಂದ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13 ರೂಪಾಯಿ ಮತ್ತು ಡೀಸೆಲ್ ಮೇಲೆ 12 ರೂಪಾಯಿ ಲಾಭ ಗಳಿಸುತ್ತಿದೆ ಎನ್ನಲಾಗಿದೆ.
ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ಗೆ 2022ರ ಮಾರ್ಚ್ ನಲ್ಲಿ 139 ಡಾಲರ್ ಇದ್ದು, 2023ರ ಜೂನ್ ನಲ್ಲಿ 75 ಡಾಲರ್ ಗೆ ಕುಸಿತ ಕಂಡಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ದೊಡ್ಡ ಪ್ರಮಾಣದಲ್ಲಿಯೇ ಇಳಿಕೆಯಾಗಲಿದೆ. ಪೆಟ್ರೋಲ್ ಲೀಟರ್ ಗೆ 5 -6 ರೂ., ಡೀಸೆಲ್ ಲೀಟರ್ ಗೆ 2-3 ರೂ.ನಷ್ಟ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.