ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಬಂಪರ್ ಆದಾಯ ಬಂದಿದೆ.
ಕಳೆದ ವರ್ಷ ಏಪ್ರಿಲ್ ನಿಂದ ನವೆಂಬರ್ ನಲ್ಲಿ 63.5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬಂದಿದೆ. ಅಬಕಾರಿ ಸುಂಕ ಏರಿಕೆಯಿಂದಲೇ ಶೇಕಡ 48 ರಷ್ಟು ಆದಾಯ ಹೆಚ್ಚಾಗಿದೆ.
2020 ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 63.5 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ. ಏಪ್ರಿಲ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ ಅಬಕಾರಿ ಸುಂಕ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ 1,96,342 ಕೋಟಿ ರೂಪಾಯಿ ಆದಾಯ ಬಂದಿದೆ.
ಈ ಅವಧಿಯಲ್ಲೇ ಲಾಕ್ಡೌನ್, ಕೊರೋನಾ ಸಂಕಷ್ಟದ ಕಾರಣದಿಂದಾಗಿ ಸುಮಾರು 1 ಕೋಟಿ ಟನ್ ನಷ್ಟು ಕಡಿಮೆ ಪ್ರಮಾಣದ ಡೀಸೆಲ್ ಮತ್ತು 30 ಲಕ್ಷ ಟನ್ ಕಡಿಮೆ ಪ್ರಮಾಣದ ಪೆಟ್ರೋಲ್ ಮಾರಾಟವಾಗಿದೆ. ಹೀಗಿದ್ದರೂ ಕೂಡ ಅಬಕಾರಿ ಸುಂಕ ಹೆಚ್ಚಳವಾದ ಕಾರಣ ಕೇಂದ್ರ ಸರ್ಕಾರದ ಆದಾಯದಲ್ಲಿ ಭಾರೀ ಏರಿಕೆಯಾಗಿದೆ.
ತೈಲೋತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕೇಂದ್ರ ಸರ್ಕಾರಕ್ಕೆ, ವ್ಯಾಟ್ ತೆರಿಗೆ ರಾಜ್ಯಸರ್ಕಾರಕ್ಕೆ ಸಂದಾಯವಾಗುತ್ತದೆ. ಪೆಟ್ರೋಲ್ ಮೇಲೆ 32.90 ರೂ., ಡೀಸೆಲ್ ಮೇಲೆ 31.83 ನಷ್ಟು ಅಬಕಾರಿ ಸುಂಕವಿದೆ ಎಂದು ಹೇಳಲಾಗಿದೆ.