ನವದೆಹಲಿ: ಕಳೆದ ತಿಂಗಳಿನಿಂದ ಏರುಗತಿಯಲ್ಲಿಯೇ ಸಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಮತ್ತೆ ಏರಿಕೆಯಾಗಿದೆ. ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ ಗೆ 28 ಪೈಸೆ ಏರಿಕೆಯಾಗಿ 95.31 ರೂಪಾಯಿ ತಲುಪಿದೆ.
ಕಳೆದ ಮೇ 4 ರಿಂದ 21 ಬಾರಿ ಇಂಧನ ದರ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಮೇ 4 ರಿಂದ ಇದುವರೆಗೆ ಲೀಟರ್ ಪೆಟ್ರೋಲ್ ದರ 4.76 ರೂಪಾಯಿ, ಡೀಸೆಲ್ ದರ 5.31 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಪ್ರತಿದಿನ ಅಂತರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ.
ದರ ಪರಿಷ್ಕರಣೆ ನಂತರ, ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 101.52 ರೂಪಾಯಿ ಆಗಿದೆ. ರಾಜಸ್ಥಾನ ಗಂಗಾನಗರದಲ್ಲಿ ದೇಶದಲ್ಲಿಯೇ ಅತಿ ಹೆಚ್ಚಿನ ದರ ಇದ್ದು, ಒಂದು ಲೀಟರ್ ಪೆಟ್ರೋಲ್ ಗೆ 106.37 ರೂಪಾಯಿ, ಪುಣೆಯಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 101.13 ರೂಪಾಯಿ, ಬೆಂಗಳೂರಿನಲ್ಲಿ 98.49 ರೂ. ದರ ಇದೆ. ಕರ್ನಾಟಕದ ಬಳ್ಳಾರಿ, ಶಿರಸಿ, ದಾವಣಗೆರೆಯಲ್ಲಿ ನಿನ್ನೆಯೇ ಪೆಟ್ರೋಲ್ ದರ ಶತಕ ದಾಟಿದೆ.