ತೆರಿಗೆ ಪಾವತಿದಾರರಿಗೆ ರಿಲೀಫ್ ಕೊಡುವ ಬೆಳವಣಿಗೆಯೊಂದರಲ್ಲಿ, 2020-21ರ ವಿತ್ತೀಯ ವರ್ಷದ ಆದಾಯ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್‌ಲೈನ್‌ಅನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಎರಡು ತಿಂಗಳು ಹಾಗೂ ಕಂಪನಿ ಹಾಗೂ ಪಾಲುದಾರಿಕೆಯ ಉದ್ಯಮಗಳಿಗೆ ಒಂದು ತಿಂಗಳ ಮಟ್ಟಿಗೆ ಡೆಡ್‌ಲೈನ್ ವಿಸ್ತರಣೆಯನ್ನು ಕೇಂದ್ರ ನೇರ ತೆರಿಗೆ ಮಂಡಳಿ ಮಾಡಿದೆ.
ಎಫ್‌ಡಿ ಮೇಲೆ ಹೂಡಿಕೆ ಮಾಡುವ ಮಂದಿ ಜೂನ್ 30ರ ಒಳಗೆ 15ಜಿ ಹಾಗೂ 15ಎಚ್ ಸಲ್ಲಿಸಬೇಕಾಗಿದೆ. ಈ ವಿಚಾರವಾಗಿ ಡೆಡ್‌ಲೈನ್‌ನಲ್ಲಿ ಯಾವುದೇ ವಿಸ್ತರಣೆ ಮಾಡಿಲ್ಲ. ಈ ಅರ್ಜಿರನ್ನು ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸದೇ ಇದ್ದಲ್ಲಿ, ದುಡ್ಡು ಕಡಿತವಾಗಲಿದೆ.
15 ಜಿ ಹಾಗೂ 15 ಎಚ್ ಅರ್ಜಿಗಳು ಸ್ಥಿರ ಠೇವಣಿಯೊಂದಿಗೆ ನೇರ ಸಂಬಂಧ ಹೊಂದಿದ್ದು, ಟಿಡಿಎಸ್ ಉಳಿತಾಯಕ್ಕೆ ನೆರವಾಗಲಿದೆ.
ಆಕರ್ಷಕ ರಿಟರ್ನ್ಸ್ ಹಾಗೂ ಬಡ್ಡಿದರಗಳ ಕಾರಣ ಸ್ಥಿರ ಠೇವಣಿ ಹೂಡಿಕೆಗೆ ಸೂಕ್ತವೆಂದು ಅನೇಕ ಮಂದಿ ಪರಿಗಣಿಸುತ್ತಾರೆ. ಈಗ ಎಫ್‌ಡಿ ಮೇಲೆ ಸಿಗುವ ರಿಟರ್ನ್ಸ್‌ಗೂ ತೆರಿಗೆ ಪಾವತಿ ಮಾಡಬೇಕಿದೆ. ಈ ಸಂಬಂಧ ರಿಸರ್ವ್ ಬ್ಯಾಂಕ್ ಗರಿಷ್ಠ ಮಿತಿಯನ್ನು ನಿಗದಿ ಪಡಿಸಿದ್ದು, ಅದನ್ನು ಮೀರಿದಲ್ಲಿ ಟಿಡಿಎಸ್ ರೂಪದಲ್ಲಿ ಹಣ ಕಡಿತ ಮಾಡಿಕೊಳ್ಳಲಾಗುವುದು.
ಆದಾಯದ ಮೇಲೆ ಟಿಡಿಎಸ್ ಕಡಿತವನ್ನು ತಪ್ಪಿಸಲು 15ಜಿ ಅರ್ಜಿಯನ್ನು ಭರ್ತಿ ಮಾಡಬೇಕಿದೆ. ಈ ಸಂಬಂಧ ಅನೇಕ ನಿರ್ಬಂಧಗಳಿದ್ದು; ಅರ್ಜಿದಾರರು ಭಾರತೀಯ ಪ್ರಜೆಗಳಾಗಿರಬೇಕು. 60 ವರ್ಷ ವಯಸ್ಸಿನ ಒಳಗಿನ ಮಂದಿ ಈ ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿ ಕಂಪನಿ ಅಥವಾ ಸಂಸ್ಥೆಗೆ ಅನ್ವಯಿಸುವುದಿಲ್ಲ. ಒಟ್ಟಾರೆ ಆದಾಯದ ಮೇಲಿನ ತೆರಿಗೆ ಶೂನ್ಯವಾಗಿರಬೇಕು. ವಾರ್ಷಿಕ ಬಡ್ಡಿಯಿಂದ ಬರುವ ಆದಾಯವು ತೆರಿಗೆ ವಿನಾಯಿತಿಯ ಗರಿಷ್ಠ ಮಿತಿಯ ಒಳಗಿರಬೇಕು.
60 ವರ್ಷ ವಯಸ್ಸಿನ ಮೇಲ್ಪಟ್ಟ ಮಂದಿ 15ಎಚ್ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಟಿಡಿಎಸ್‌ಅನ್ನು ತಪ್ಪಿಸಿಕೊಳ್ಳಬಹುದು.
ಎರಡೂ ಅರ್ಜಿಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ಮೂಲ ವಿವರಗಳನ್ನು ಭರ್ತಿ ಮಾಡಿ, ಪಾನ್ ಕಾರ್ಡ್ ಹಾಗೂ ತೆರಿಗೆ ಘೋಷಣೆಯ ಸಾಕ್ಷಿಯನ್ನು ಲಗತ್ತಿಸಬೇಕು. ಈ ಅರ್ಜಿಗಳನ್ನು ನಿಮ್ಮ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ವ್ಯಕ್ತಿಗೆ ನೀಡಬೇಕು.