ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಸಲ್ಲಿಸಿದ ಮೇಲ್ಮನವಿ ಹಾಗೂ 1995ರ ನೌಕರರ ಭವಿಷ್ಯ ನಿಧಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ 67 ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಿನ್ನೆಯಿಂದ ಆರಂಭವಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಅನಿರುದ್ಧ್ ಬೋಸ್ ಮತ್ತು ಸುಧಾಂಶು ದುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದೆ. ಇಪಿಎಫ್ಒ ವಕೀಲರ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿದ್ದು, ಮೂರು ದಿನಗಳ ಕಾಲ ವಾದ ಪ್ರತಿವಾದ ನಡೆಯಲಿದೆ.
ನೌಕರರ ಭವಿಷ್ಯ ನಿಧಿ(ಇಪಿಎಸ್ 95) ಕಾಯ್ದೆಯಡಿ ಕಡಿಮೆ ಪಿಂಚಣಿ ನೀಡಿಲಾಗಿದೆ ಎಂದು 2014ರಲ್ಲಿ ನಿವೃತ್ತ ನೌಕರ ಆರ್.ಸಿ. ಗುಪ್ತಾ ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಗುಪ್ತಾ ಅವರಿಗೆ ಮಾಸಿಕ 28,000 ರೂ. ಪಿಂಚಣಿ ನೀಡಬೇಕೆಂದು 2016ರಲ್ಲಿ ಆದೇಶಿಸಿದತ್ತು.
ಇದಾದ ನಂತರ ಅನೇಕರು ಕಡಿಮೆ ಪಿಂಚಣಿಯ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಹೈಕೋರ್ಟ್ ಕೂಡ ಪಿಂಚಣಿದಾರರ ಪರವಾಗಿ ತೀರ್ಪು ನೀಡಿತ್ತು. ಅನೇಕ ಪ್ರಕರಣಗಳಲ್ಲಿ ಪಿಂಚಣಿದಾರರ ಪರವಾಗಿ ಆದೇಶಗಳು ಬಂದಿದ್ದ ಕಾರಣ ನೌಕರರ ಭವಿಷ್ಯ ನಿಧಿ ಸಂಸ್ಥೆ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ಪಿಂಚಣಿದಾರರು ಕೂಡ ಕೋರ್ಟ್ ಮೊರೆ ಹೋಗಿದ್ದರು.
ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ವ್ಯಾಪಕ ಚರ್ಚೆ ಅಗತ್ಯವಿದ್ದು, ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ತಿಳಿಸಿತ್ತು.
ನಿನ್ನೆಯಿಂದ ವಿಚಾರಣೆ ಆರಂಭವಾಗಿದ್ದು, ದೇಶದಲ್ಲಿ ಸುಮಾರು 78 ಲಕ್ಷಕ್ಕೂ ಅಧಿಕ ಮಂದಿ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಇಪಿಎಸ್ 95 ಕಾಯ್ದೆಯಿಂದ ಅನ್ಯಾಯವಾಗಿದ್ದು, ಪಿಂಚಣಿ ಸೌಲಭ್ಯ ಹೆಚ್ಚಿಸಬೇಕೆಂದು ಒತ್ತಾಯಿಸಲಾಗಿದೆ. ಸುಪ್ರೀಂಕೋರ್ಟ್ ಪಿಂಚಣಿದಾರರ ಪರವಾಗಿ ತೀರ್ಪು ನೀಡುವ ಸಾಧ್ಯತೆಯಿದ್ದು, ಮಾಸಿಕ ಪಿಂಚಣಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.