ನವದೆಹಲಿ: ನೌಕರರ ಪಿಂಚಣಿ ಯೋಜನೆ ಇಪಿಎಸ್ ಅನ್ವಯ ಎಲ್ಲಾ ಪಿಂಚಣಿದಾರರು ಪ್ರತಿವರ್ಷ ಪಿಂಚಣಿ ಪಡೆಯಲು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ ಇಪಿಎಫ್ಒ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ತನ್ನ ಪಿಂಚಣಿದಾರರಿಗೆ ಬಹು ಆಯ್ಕೆಗಳ ಅವಕಾಶ ಕಲ್ಪಿಸಿದೆ.
ಪಿಂಚಣಿದಾರರು ತಮ್ಮ ಮನೆಯ ಸಮೀಪ ಅಥವಾ ಮನೆಯ ಬಾಗಿಲಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಹಲವು ವಿಧಾನ ಮತ್ತು ಏಜೆನ್ಸಿಗಳ ಆಯ್ಕೆಯ ಮೂಲಕ ಸಲ್ಲಿಕೆಯಾಗುವ ಜೀವಿತ ಪ್ರಮಾಣಪತ್ರಗಳು ಮಾನ್ಯವಾಗಿರುತ್ತದೆ ಎಂದು ಹೇಳಲಾಗಿದೆ.
ದೇಶಾದ್ಯಂತ ಇಪಿಎಫ್ ಹೊಂದಿರುವ 117 ಜಿಲ್ಲಾ ಕಛೇರಿಗಳು, 135 ಪ್ರಾದೇಶಿಕ ಕಚೇರಿಗಳ ಜೊತೆಗೆ ಇಪಿಎಸ್ ಪಿಂಚಣಿದಾರರು ಸಮೀಪದ ಅಂಚೆ ಕಚೇರಿ, ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಗಳಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ಇದರೊಂದಿಗೆ 3.65 ಲಕ್ಷಕ್ಕಿಂತ ಹೆಚ್ಚಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ.
‘ಉಮಾಂಗ್ ಆಪ್’ ಬಳಸಿ ಕೂಡ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಲೈವ್ ಸರ್ಟಿಫಿಕೇಟ್ ಸಲ್ಲಿಸಲು ಪಿಂಚಣಿದಾರರಿಗೆ ಮನೆ ಬಾಗಿಲ ಸೇವೆಯನ್ನು ಆರಂಭಿಸಿದೆ. ಪಿಂಚಣಿದಾರರು ಈ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಅತ್ಯಲ್ಪ ಶುಲ್ಕ ವಿಧಿಸಲಾಗುತ್ತದೆ. ಅಂಚೆ ಕಚೇರಿಯ ಸಿಬ್ಬಂದಿ ಪಿಂಚಣಿದಾರರ ಮನೆಬಾಗಿಲಿಗೆ ಹೋಗಿ ಸೇವೆ ನೀಡುತ್ತಾರೆ.
ಪಿಂಚಣಿದಾರರಿಗೆ ಅನುಕೂಲವಾಗುವಂತೆ ವರ್ಷದ ಯಾವುದೇ ಸಮಯದಲ್ಲಿ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸಲ್ಲಿಸಿದ ದಿನದಿಂದ ಒಂದು ವರ್ಷದವರೆಗೆ ಅದು ಮಾನ್ಯತೆ ಹೊಂದಿರುತ್ತದೆ. 2020ರಲ್ಲಿ ಅಂದರೆ ಈ ವರ್ಷ ಪಿಂಚಣಿ ಪಾವತಿ ಆದೇಶ ಸ್ವೀಕರಿಸಿದ ಪಿಂಚಣಿದಾರರು ಒಂದು ವರ್ಷ ಪೂರ್ಣವಾಗುವವರೆಗೆ ಜೀವಿತ ಪ್ರಮಾಣ ಪತ್ರ ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಮೊದಲು ಎಲ್ಲಾ ಪಿಂಚಣಿದಾರರು ನವೆಂಬರ್ ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಪಿಂಚಣಿದಾರರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.