ನವದೆಹಲಿ: ಫ್ಲ್ಯಾಟ್ ವಿತರಣೆ ವಿಳಂಬದ ಅವಧಿಗೆ ಬಿಲ್ಡರ್ ಗಳು ಮನೆ ಖರೀದಿದಾರರಿಗೆ ವಾರ್ಷಿಕ ಶೇಕಡ 6ರಷ್ಟು ಬಡ್ಡಿ ಪಾವತಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಅಪಾರ್ಟ್ಮೆಂಟ್ ಖರೀದಿದಾರರ ಒಪ್ಪಂದದ ಉಲ್ಲೇಖದ ಅನ್ವಯ ಸುಪ್ರೀಂಕೋರ್ಟ್ ಈ ಕುರಿತು ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಕೆ.ಎಂ. ಜೋಸೆಫ್ ಅವರ ನ್ಯಾಯಪೀಠ ಡಿಎಲ್ಎಫ್ ಸದರನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್(ಬೆಗೂರ್ ಒಎಂಆರ್ ಹೋಮ್ಸ್) ಮತ್ತು ಅಣ್ಣಾಬೆಲ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಪ್ರೈವೆಟ್ ಲಿಮಿಟೆಡ್ ಬೆಂಗಳೂರಿನ ಬೆಗು ಎಂಬಲ್ಲಿ 1980 ಫ್ಲಾಟ್ ನಿರ್ಮಿಸುತ್ತಿರುವ ಕುರಿತಾಗಿ ಮಾಹಿತಿ ಕೇಳಿದೆ.
2 ರಿಂದ 4 ವರ್ಷ ವಿಳಂಬದ ನಂತರ ಖರೀದಿದಾರರಿಗೆ ಫ್ಲ್ಯಾಟ್ ವಿತರಿಸದೆ ಇರುವ ಬಿಲ್ಡರ್ ಗಳು ವಿಳಂಬ ವಿತರಣೆಯ ಕಾರಣಕ್ಕೆ ಶೇಕಡ 6 ರಷ್ಟು ಬಡ್ಡಿ ಪಾವತಿಸಲು ಸೂಚಿಸಲಾಗಿದೆ. ಅಪಾರ್ಟ್ ಮೆಂಟ್ ಖರೀದಿದಾರರ ಒಪ್ಪಂದದ ಅನ್ವಯ 1500 ಚದರ ಅಡಿ ಫ್ಲ್ಯಾಟ್ ಗೆ ತಿಂಗಳಿಗೆ 7500 ರೂ. ಪಾವತಿಸಬೇಕಾಗುತ್ತದೆ ಎನ್ನಲಾಗಿದೆ.