ವಿತ್ತೀಯ ಮಸೂದೆ 2021ಕ್ಕೆ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಈ ಮೂಲಕ 2021-22ರ ವಿತ್ತೀಯ ವರ್ಷಕ್ಕೆ ಕೇಂದ್ರ ಸರ್ಕಾರದ ವಿತ್ತೀಯ ಪ್ರಸ್ತಾವನೆಗಳಿಗೆ ಇಂಬು ಕೊಡಲಾಗಿದೆ.
ಲೋಕಸಭೆಯ ಅನುಮೋದನೆ ಸಿಕ್ಕ ಮಾರನೇ ದಿನವೇ ರಾಜ್ಯಸಭೆಯಲ್ಲೂ ಮಸೂದೆಗೆ ಅಸ್ತು ಎನ್ನಲಾಗಿತ್ತು. ವಿತ್ತೀಯ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ 2021-22 ಆಯವ್ಯಯದ ಪ್ರಕ್ರಿಯೆಗಳು ಮುಗಿದಿವೆ.
ಆರ್ಥಿಕ ನಿರ್ವಹಣೆ ವಿಚಾರದಲ್ಲಿ ಹಿಂದಿನ ಯುಪಿಎ ಸರ್ಕಾರ ತಪ್ಪು ಹೆಜ್ಜೆಗಳನ್ನು ಇಟ್ಟಿತ್ತು ಎಂದು ಆಪಾದಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಸೂದೆ ಮೇಲಿನ ಸಂಸದೀಯ ಚರ್ಚೆಯೊಂದರಲ್ಲಿ ಮಾತನಾಡುತ್ತಾ, “ಸದ್ಯದ ಮಟ್ಟಿಗೆ, ಮಾರ್ಚ್ 2020ರ ವೇಳೆಗೆ ಅನುತ್ಪಾದಕ ಆಸ್ತಿಯ ಮೌಲ್ಯವು 8.99 ಲಕ್ಷ ಕೋಟಿಗೆ ತಗ್ಗಿದೆ” ಎಂದಿದ್ದಾರೆ.
“2008ರ ವಿತ್ತೀಯ ಸಂಕಷ್ಟವು ಕೋವಿಡ್-19 ಸಂಕಷ್ಟದಂತೆ ಇರಲಿಲ್ಲ. ಕೋವಿಡ್ನ ವಿಪರೀತ ಘಳಿಗೆಯಲ್ಲೂ ಸಹ ನಮ್ಮ ಪ್ರಧಾನ ಮಂತ್ರಿ ನೂರಕ್ಕೂ ಅಧಿಕ ವರ್ಚುವಲ್ ಸಭೆಗಳಲ್ಲಿ ಭಾಗಿಯಾಗುವ ಮೂಲಕ ಸಂಕಷ್ಟದ ಪರಿಸ್ಥಿತಿ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಕಳೆದ ವರ್ಷ ನಾವು ಕೆಲವೊಂದು ಮಿನಿ ಬಜೆಟ್ಗಳನ್ನು ಮುಂದಿಟ್ಟಿದ್ದೆವು ಈಗ ಈ ಬಜೆಟ್ಟನ್ನೂ ಮುಂದಿಟ್ಟಿದ್ದೇವೆ. ನಾವು ಆರ್ಥಿಕತೆಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೇವೆ” ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.