ಕಳೆದ ವರ್ಷದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ 32 ಮಿಲಿಯನ್ ಜನತೆ ಮಧ್ಯಮ ವರ್ಗದ ಗೆರೆಯಿಂದ ನೂಕಲ್ಪಟ್ಟಿದ್ದಾರೆ. ಕೆಲಸ ಕಳೆದುಕೊಂಡಿದ್ದರಿಂದ ಮಿಲಿಯನ್ಗಟ್ಟಲೇ ಭಾರತೀಯರು ಬಡತನ ರೇಖೆಗೆ ನೂಕಲ್ಪಟ್ಟಿದ್ದಾರೆ.
ಮಧ್ಯಮ ವರ್ಗದ ಭಾರತೀಯರು ಅಥವಾ ದಿನಕ್ಕೆ 700 ರೂಪಾಯಿಯಿಂದ ಹಾಗೂ 1400 ರೂಪಾಯಿ ಗಳಿಸುವವರ ಸಂಖ್ಯೆ 32 ಮಿಲಿಯನ್ ಕುಗ್ಗಿದೆ. ಈ ಹಿಂದೆ 99 ಮಿಲಿಯನ್ ಇದ್ದ ಮಧ್ಯಮ ವರ್ಗದ ಜನಸಂಖ್ಯೆ ಇದೀಗ 66 ಮಿಲಿಯನ್ಗೆ ಬಂದು ತಲುಪಿದೆ ಎಂದು ಅಮೆರಿಕ ಮೂಲದ ಸಂಸ್ಥೆಯೊಂದರ ಸಮೀಕ್ಷೆ ಹೇಳಿದೆ.
ಕೋವಿಡ್ 19ನಿಂದಾಗಿ ಭಾರತದಲ್ಲಿ ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ವ್ಯಾಪಕ ಇಳಿಕೆ ಕಂಡುಬಂದಿದ್ದು ಬಡತನ ರೇಖೆಯಲ್ಲಿರುವ ಸಂಖ್ಯೆ ಶೀಘ್ರ ಏರಿಕೆ ಕಂಡುಬಂದಿದೆ. ಕೊರೊನಾದಿಂದ ಚೀನಾಕ್ಕೆ ಆದ ನಷ್ಟಕ್ಕಿಂತ ಹೆಚ್ಚಿನ ನಷ್ಟವನ್ನ ಭಾರತ ಅನುಭವಿಸಿದೆ ಎಂದು ಸಮೀಕ್ಷೆ ಹೇಳಿದೆ. 2011 ರಿಂದ 2019ರ ಅವಧಿಯಲ್ಲಿ ಸುಮಾರು 57 ಮಿಲಿಯನ್ ಮಂದಿ ಮಧ್ಯಮವರ್ಗಕ್ಕೆ ಸೇರ್ಪಡೆಯಾಗಿದ್ದರು.
ಕಳೆದ ವರ್ಷ ಜನವರಿಯಲ್ಲಿ ವಿಶ್ವ ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ಚೀನಾ ಹಾಗೂ ಭಾರತಗಳೆರಡೂ ಸರಿ ಸುಮಾರು ಒಂದೇ ಪ್ರಮಾಣದ ಆರ್ಥಿಕ ಪ್ರಗತಿಯನ್ನ ಕಂಡಿದೆ. ಭಾರತ ಹಾಗೂ ಚೀನಾದ ಆರ್ಥಿಕ ಪ್ರಗತಿ ಕ್ರಮವಾಗಿ 5.8 ಹಾಗೂ 5.9 ಪ್ರತಿಶತ ಇದೆ.
ಇದೀಗ ಕೊರೊನಾ ವೈರಸ್ ವಿಶ್ವಕ್ಕೆ ಭಾದಿಸಿ ವರ್ಷಗಳೇ ಕಳೆದಿದೆ. ಇದೀಗ ವಿಶ್ವ ಬ್ಯಾಂಕ್ ಭಾರತ ಹಾಗೂ ಚೀನಾದ ಆರ್ಥಿಕ ಪ್ರಗತಿಯನ್ನ ಮರುಪರಿಶೀಲಿಸಿದ್ದು, ಭಾರತದ ಆರ್ಥಿಕ ಪ್ರಗತಿ 9.6 ಪ್ರತಿಶತ ಸಂಕುಚಿತವಾಗಿದ್ದರೆ, ಚೀನಾದ ಆರ್ಥಿಕ ಪ್ರಗತಿ 2 ಪ್ರತಿಶತ ಏರಿಕೆ ಕಂಡಿದೆ.