ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆ ದಿನಾಂಕವನ್ನು ಮೋದಿ ಸರ್ಕಾರ ಮತ್ತೆ ವಿಸ್ತರಿಸಿತ್ತು. ಜೂನ್ 30ರೊಳಗೆ ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಅವಕಾಶವಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಆಧಾರ್ ಜೊತೆ ಪಾನ್ ಲಿಂಕ್ ಸಾಧ್ಯವಾಗದೆ ಹೋದಲ್ಲಿ ದಂಡ ಪಾವತಿ ಮಾಡಬೇಕಾಗುತ್ತದೆ.
ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಸರ್ಕಾರ ಈ ಹಿಂದೆ ಮಾರ್ಚ್ 31, 2021ರ ಗಡುವು ನೀಡಿತ್ತು. ನಂತ್ರ ಕೇಂದ್ರೀಯ ನೇರ ತೆರಿಗೆ ಮಂಡಳಿ ಈ ಗಡುವನ್ನು ಜೂನ್ 30,2021ಕ್ಕೆ ವಿಸ್ತರಿಸಿದೆ. ಜೂನ್ 30 ರೊಳಗೆ ಪಾನ್ ಕಾರ್ಡ್-ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಅಲ್ಲದೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡದೆ ಹೋದವರು ಈಗಲೇ ಈ ಕೆಲಸ ಮುಗಿಸಿ. ಒಂದು ವೇಳೆ ಲಿಂಕ್ ಆಗಿದ್ದು, ನಿಮಗೆ ಮರೆತು ಹೋಗಿದ್ದರೆ ಅದನ್ನು ಆನ್ಲೈನ್ ನಲ್ಲಿ ಚೆಕ್ ಮಾಡಬಹುದು.
ಮೊದಲು ಆದಾಯ ತೆರಿಗೆ ಪೋರ್ಟಲ್ ಗೆ ಹೋಗಬೇಕು. ಲಾಗ್-ಇನ್ ಐಡಿ, ಪಾಸ್ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಲಾಗ್ ಇನ್ ಮಾಡಬೇಕು. ಹೊಸ ಪೇಜ್ ತೆರೆಯುತ್ತಿದ್ದಂತೆ ಲಿಂಕ್ ಆಧಾರ್ ಆಯ್ಕೆ ಕಾಣಿಸುತ್ತದೆ.
ಅದ್ರ ಮೇಲೆ ಕ್ಲಿಕ್ ಮಾಡಬೇಕು. ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ಮುಂತಾದ ವಿವರಗಳನ್ನು ನಮೂದಿಸಬೇಕು. ನೀವು ಈ ಮೊದಲೇ ನಮೂದಿಸಿರುವ ಕಾರಣ ಹೊಸ ಪೇಜ್ ನಲ್ಲಿ ವಿವರ ಕಾಣುತ್ತದೆ. ಅದನ್ನು ಪರಿಶೀಲಿಸಬೇಕು. ವಿವರ ಸರಿಯಿದ್ದಲ್ಲಿ ಆಧಾರ್ ಕಾರ್ಡ್ ನಮೂದಿಸಿ ಲಿಂಕ್ ಮಾಡಿ ಬಟನ್ ಕ್ಲಿಕ್ ಮಾಡಿ. ನೀವು ಈಗಾಗಲೇ ಆಧಾರ್-ಪಾನ್ ಲಿಂಕ್ ಮಾಡಿದ್ದರೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂಬ ಸಂದೇಶ ಬರುತ್ತದೆ.