ರಾಯಚೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತವನ್ನು ಕನಿಷ್ಟ 25 ಕ್ವಿಂಟಾಲ್ ಮತ್ತು ಗರಿಷ್ಟ 75 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುವುದು. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 1,940 ರೂ. ಹಾಗೂ ಗ್ರೇಡ್-ಎ ಪ್ರತಿ ಕ್ವಿಂಟಾಲ್‌ಗೆ 1,960 ರೂ.ಗಳ ರಂತೆ ನಿಗದಿಪಡಿಸಲಾಗಿದೆ.
2021-22ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಯಚೂರು ಜಿಲ್ಲೆಯ ರೈತರಿಂದ ಭತ್ತ ಖರೀದಿ ಕೆಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ರೈತರು ಸದುಪಯೋಗ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ಕೋರಿದ್ದಾರೆ.
ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೋಂದಾಯಿಸಿಕೊಳ್ಳುವುದು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಕೋವಿಡ್ 19 ಹರಡುವಿಕೆ ಹಿನ್ನಲೆಯಲ್ಲಿ ರೈತರು ನೋಂದಣಿ ಸಮಯದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್, ಧರಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.